ಜಿಲ್ಲೆ

ವಿದ್ಯಾರ್ಥಿಗಳಿಂದ ಹಸಿರು ಕಾಣಿಕೆ ಸಮರ್ಪಣೆ : ಚಂಪಾಷಷ್ಠಿ ಜಾತ್ರೋತ್ಸವ ಹಿನ್ನೆಲೆ ವಿದ್ಯಾಲಯದಿಂದ 1528 ಕೆಜಿ ಅಕ್ಕಿ ಅರ್ಪಣೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಸಿರು ಕಾಣಿಕೆ ಶನಿವಾರ ಶ್ರೀ ದೇವಳಕ್ಕೆ ಅರ್ಪಿಸಿದರು.

ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಮನೆಯಿಂದ ತಂದ ಸುವಸ್ತುಗಳನ್ನು ಶ್ರೀ ದೇವರಿಗೆ ಅರ್ಪಿಸಿದರು. ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ ಕೂಡಾ ಸೇವೆ ನೆರವೇರಿಸಿದರು.

ಶನಿವಾರ ಬೆಳಗ್ಗೆ ಎಲ್ಲ ವಿದ್ಯಾರ್ಥಿಗಳು ತಾವು ತಂದ ವಸ್ತುಗಳನ್ನು ತಮ್ಮ ತರಗತಿಯಲ್ಲಿ ಒಟ್ಟಾಗಿ ಇರಿಸಿದರು. ಉಪನ್ಯಾಸಕರು ಮತ್ತು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪನ್ಯಾಸಕರ ಕೊಠಡಿಯಲ್ಲಿ ಸುವಸ್ತುವನ್ನು ಇರಿಸಿದರು. ಬಳಿಕ ಎಲ್ಲವನ್ನೂ ಒಟ್ಟಾಗಿ ರಂಗ ಮಂದಿರಕ್ಕೆ ತಂದು ಇರಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ನೀಡಿದ ಧನ ಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ಸಕ್ಕರೆ ಖರೀದಿಸಿ ಕಾಲೇಜಿಗೆ ತರಲಾಯಿತು.

ಕಾಲೇಜಿನಿಂದ ಹಸಿರು ಕಾಣಿಕೆ ಹೊರಡುವ ಮೊದಲು ರಂಗ ಮಂದಿರದಲ್ಲಿ ಎಲ್ಲ ಸುವಸ್ತುವನ್ನು ಒಟ್ಟಾಗಿ ಇರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ಪ್ರಾರ್ಥನೆ ಮಾಡಿದರು. ಸುವಸ್ತುಗಳಿಗೆ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಪೂಜೆ ನೆರವೇರಿಸಿದರು. ಪ್ರಾಚಾರ್ಯರು ಶ್ರೀ ಕ್ಷೇತ್ರ ಮಹಾತ್ಮೆ ಮತ್ತು ಹಸಿರು ಕಾಣಿಕೆ ಮಹತ್ವ ತಿಳಿಸಿದರು. ನಂತರ ಹೂ, ತಳಿರು ತೋರಣ ಮತ್ತು ಬಾಳೆಯಿಂದ ಅಲಂಕರಿಸಿದ ವಾಹನದಲ್ಲಿ ಹಸಿರು ಕಾಣಿಕೆ ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು.

ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಮಾಧವ ಮೂಕಮಲೆ, ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಇದ್ದರು. ಉಪನ್ಯಾಸಕರಾದ ರತ್ನಾಕರ.ಎಸ್ ಮತ್ತು ಮನೋಜ್ ಕುಮಾರ್ ಬಿ.ಎಸ್.ಹಸಿರು ಕಾಣಿಕೆ ವ್ಯವಸ್ಥೆ ಜವಾಬ್ದಾರಿ ವಹಿಸಿಕೊಂಡಿದ್ದರು.

ದೇವಳಕ್ಕೆ ಹಸ್ತಾಂತರ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಶ್ರೀ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು ಅವರಿಗೆ ಹಸಿರು ಕಾಣಿಕೆ ತಾಂಬೂಲ ನೀಡುವ ಮೂಲಕ ಹಸ್ತಾಂತರಿಸಿ, ಶ್ರೀ ದೇವಳಕ್ಕೆ ಸಮರ್ಪಿಸಿದರು.

ವಿದ್ಯಾರ್ಥಿಗಳ ಸೇವೆ

1528 ಕೆಜಿ(15 ಕ್ವಿಂಟಾಲ್ 28 ಕೆಜಿ) ಸೋನಾಮಸೂರಿ ಅಕ್ಕಿ, 1978 ತೆಂಗಿನಕಾಯಿ, 300 ಕೆಜಿ ಬೆಲ್ಲ, 400 ಕೆಜಿ ಸಕ್ಕರೆ, 350 ಹಣ್ಣು ಅಡಕೆ, ಹಿಂಗಾರ, ಜೇನು ತುಪ್ಪ, ಏಲಕ್ಕಿ, ಬಾಳೆಹಣ್ಣು, ಬಾಳೆಗೊನೆ, ಬಾಳೆ ಎಲೆ, ಕಾಳು ಮೆಣಸು, ಸೀಯಾಳ ಸಮರ್ಪಿಸಲಾಯಿತು. ಕುಂಬಳಕಾಯಿ, ತೊಂಡೆಕಾಯಿ, ಚೀನಿಕಾಯಿ, ಸೌತೆಕಾಯಿ, ಹಲಸಿನ ಗುಜ್ಜೆ, ಟೊಮೇಟೋ, ಹೀರೆಕಾಯಿ, ಅಲಸಂಡೆ, ಸುವರ್ಣಗೆಡ್ಡೆ, ಸೋರೆಕಾಯಿ, ಬದನೆ ಸೇರಿದಂತೆ 70 ಕೆಜಿ ತರಕಾರಿಗಳನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.