ಮಡಿಕೇರಿ: ಮಡಿಕೇರಿಯ ಕೋಟೆಯಲ್ಲಿ ಬ್ರಿಟಿಷ್ ಧ್ವಜ ಇಳಿಸಿ, ತ್ರಿವರ್ಣ ಧ್ವಜ ಹಾರಿಸಿದ ಸ್ವಾತಂತ್ರೃ ಹೋರಾಟಗಾರ ಮಲ್ಲೇಂಗಡ ಪಿ. ಚಂಗಪ್ಪ ಅವರ ಪುತ್ಥಳಿ ಮಡಿಕೇರಿ ಕೋಟೆಯಲ್ಲಿ ಸ್ಥಾಪಿಸಬೇಕೆಂದು ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸ್ವಾತಂತ್ರೃ ಚಳುವಳಿಯಲ್ಲಿ ಕೊಡವರು ವಿಷಯ ಕುರಿತು ರೆಡ್ ಕ್ರಾಸ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯ ಸರ್ಕಾರ ಕೊಡಗಿನಲ್ಲಿ ಕೊಡವ ಸ್ವಾತಂತ್ರೃ ಹೋರಾಟಗಾರರ ಮ್ಯೂಸಿಯಂ ಸ್ಥಾಪಿಸಬೇಕು. ಸರ್ಕಾರ ಮ್ಯೂಸಿಯಂ ಮಾಡದಿದ್ದಲ್ಲಿ ಕೊಡವರ ಮನೆ- ಮನೆಯಿಂದ ಭಿಕ್ಷೆ ಕೇಳಿ ಕೊಡವಾಮೆರ ಕೊಂಡಾಟ ಸಂಘಟನೆಯಿಂದ ಮ್ಯೂಸಿಯಂ ಸ್ಥಾಪಿಸಲಾಗುವುದೆಂದರು.
ಟಿಪ್ಪು ಸೇರಿದ್ದಂತೆ ಹಲವರು ಕೊಡವರ ಮಾರಣ ಹೋಮ ಮಾಡಿದ್ದಾರೆ. ವಿರಳ ಜನಸಂಖ್ಯೆ ಹೊಂದಿರುವ ಕೊಡವ ಜನಾಂಗದಿಂದ ಸಾಕಷ್ಟು ಜನ ಸ್ವಾತಂತ್ರೃ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ೨೪೭ ಜನರ ಮಾಹಿತಿಯನ್ನು ತಮ್ಮ ಸಂಘಟನೆ ಸಂಗ್ರಹಿಸಿದೆ. ಸ್ವಾತಂತ್ರೃ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಕೊಡವ ಸ್ವಾತಂತ್ರೃ ಹೋರಾಟಗಾರರನ್ನು ನೆನೆಯದ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಯಿಂದ ಈ ಕಾರ್ಯ ಕ್ರಮ ಆಯೋಜಿಸಲಾಗಿದೆ ಎಂದರು.