ಹನೂರು: ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ನರೇಗಾ ಯೋಜನೆಯಡಿ 207 ಕಾಮಗಾರಿಗಳು ನಡೆದಿದ್ದು, 76.77 ಲಕ್ಷ ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ನರೇಗಾ ತಾಲೂಕು ಸಂಯೋಜಕ ಸಿದ್ದಪ್ಪಾಜಿ ತಿಳಿಸಿದರು.
ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ಮಂಗಳವಾರ ಕಚೇರಿಯ ಆವರಣದಲ್ಲಿ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ನರೇಗಾ ಯೋಜನೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಲ್ಲಿ ಪ್ರತಿ ಕುಟುಂಬವೂ ಉದ್ಯೋಗ ಪಡೆಯಬಹುದಾಗಿದೆ. ಈ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣ, ದನದ ಕೊಟ್ಟಿಗೆ, ಜಮೀನು ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದರ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ಯೋಜನೆಗೆ ಅನುದಾನ, ದನದ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಚೆಕ್ ಡ್ಯಾಂ, ಚರಂಡಿ ನಿರ್ಮಾಣ, ರಸ್ತೆ, ಕಾಲುವೆ ಅಭಿವೃದ್ಧಿ, ಸಿಸಿ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆದಿವೆ. ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಾಣ ಹಾಗೂ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾಮಗಾರಿ ಸೇರಿದಂತೆ 207 ಕಾಮಗಾರಿಗಳು ನಡೆದಿದ್ದು, ಕೂಲಿ ವೆಚ್ಚ 42,31,755 ರೂ. ಹಾಗೂ ಸಾಮಗ್ರಿ ವೆಚ್ಚ 34,45,965 ರೂ. ಸೇರಿದಂತೆ 76,77,720 ರೂ. ಅನುದಾನ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ನರೇಗಾ ಯೋಜನೆಯಡಿ ಕೈಗೊಳ್ಳಲಾಗಿದ್ದ ಅಭಿವೃದ್ಧಿ ಕಾಮಗಾರಿಗಳ ವಿವರಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಚಾಮಮ್ಮ, ಉಪಾಧ್ಯಕ್ಷ ಚನ್ನಯ್ಯ, ಸದಸ್ಯರು, ಪಿಡಿಒ ಮಹದೇವಪ್ರಭು, ಕಾರ್ಯದರ್ಶಿ ವೆಂಕಟೇಶ್, ಬಿಲ್ ಕಲೆಕ್ಟರ್ ಕೃಷ್ಣಮೂರ್ತಿ ಹಾಗೂ ಗ್ರಾಮಸ್ಥರು ಇದ್ದರು.