ಗುಂಡ್ಲುಪೇಟೆ: ದೇಶದ ಪ್ರಸಿದ್ಧ ಹುಲಿ ಆವಾಸ ಸ್ಥಳಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಭಾನುವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 1973ರಲ್ಲಿ ಬಂಡೀಪುರದಲ್ಲಿ ಹುಲಿ ಯೋಜನೆ ೋಷಣೆ ಮಾಡಲಾಯಿತು. ಅಂದಿನಿಂದ ಇಂದಿಗೆ 50 ವರ್ಷ ಪೂರ್ಣಗೊಂಡಿದ್ದು, ಈ ಸಂಭ್ರಮಕ್ಕೆ ದೇಶದ ಪ್ರಧಾನಿ ಸಾಕ್ಷಿಯಾಗಿರುವುದು ವಿಶೇಷ. ಬಂಡೀಪುರಕ್ಕೆ ಭೇಟಿ ಕೊಟ್ಟ ಮೊದಲ ಪಿಎಂ ನರೇಂದ್ರಮೋದಿ ಎನ್ನುವುದು ಮತ್ತೊಂದು ವಿಶೇಷ.
ಪ್ರಧಾನಿ ಮೋದಿ ಬೆಳಗ್ಗೆ ಬಂಡೀಪುರಕ್ಕೆ ಆಗಮಿಸಿ ಸಾರಿ ನಡೆಸಿದರು. ಆನೆ, ಕಾಟಿ, ಜಿಂಕೆಗಳು ದರ್ಶನ ನೀಡಿದವು. ಸುಮಾರು 2.15 ಗಂಟೆ ಕಾಡಿನಲ್ಲಿ ಸುತ್ತಾಡಿದ ಪ್ರಕೃತಿಯ ಸಿರಿಗೆ ನಮೋ ಮನಸೋತರು. ಬಳಿಕ ಮಧುಮಲೈ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಿದರು. ಬಂಡೀಪುರಕ್ಕೆ ಪ್ರಧಾನಿ ಆಗಮಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಈ ಅರಣ್ಯದ ಮಹತ್ವವನ್ನು ಪರಿಸರ ಪ್ರಿಯರು ಮತ್ತಷ್ಟು ತಿಳಿಯಲು ಪ್ರಯತ್ನಿಸಿದ್ದರು. ಭಾನುವಾರ ಪಿಎಂ ಭೇಟಿ ನೀಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಂಡೀಪುರ ಮತ್ತು ಮೋದಿ ಪೋಟೋ ಟ್ರೆಂಡ್‌ನಲ್ಲಿದ್ದುದು ವಿಶೇಷ. ಕೇರಳ ಮತ್ತು ತಮಿಳುನಾಡು ಗಡಿಯಲ್ಲಿರುವ ಬಂಡೀಪುರಕ್ಕೆ ಪ್ರವಾಸಿರ ದಂಡೇ ಹರಿದುಬರುತ್ತದೆ. ವಾರಾಂತ್ಯದ ದಿನಗಳಲ್ಲಿ ಪರಿಸರ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಪ್ರಧಾನಿ ಭೇಟಿ ಬಳಿಕ ಬಂಡೀಪುರದ ಖ್ಯಾತಿ ಮತ್ತಷ್ಟು ಹೆಚ್ಚಲಿದೆ.
ಸಂಖ್ಯೆ ಹೆಚ್ಚಲಿದೆ: ಗುಂಡ್ಲುಪೇಟೆ ಪ್ರವಾಸೋದ್ಯಮದ ಮೇಲೆ ನಿಂತಿದೆ. ರೆಸಾರ್ಟ್, ಹೋಟೆಲ್ ಉದ್ಯಮಗಳು ಬೆಳೆದುನಿಂತಿವೆ. ವಾರಾಂತ್ಯದಲ್ಲಿ ಬರುವ ಪ್ರವಾಸಿಗರನ್ನೇ ಈ ಉದ್ಯಮ ನೆಚ್ಚಿಕೊಂಡಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಷ್ಟು ಲಾಭ ಕಾಣಲಿವೆ. ಇದೀಗ ಮೋದಿ ಭೇಟಿ ನೀಡಿದ್ದು ಬಂಡೀಪುರ ಪ್ರವಾಸೋದ್ಯಮಕ್ಕೆ ಇನ್ನಷ್ಟು ಮೆರುಗು ನೀಡಿದೆ.
ಅಭಿಮಾನಿಗಳಿಗೆ ನಿರಾಸೆ: ದೇಶದ ಹೆಮ್ಮೆಯ ಪ್ರಧಾನಿ ಬಂಡೀಪುರಕ್ಕೆ ಆಗಮಿಸಿದರೂ ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜನಪ್ರತಿನಿಧಿಗಳು ಹಾಗೂ ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ಇದರಿಂದ ನಿರಾಸೆಯಾಗಿದೆ.
ಸರ್ಕಾರದ ಸಚಿವರು, ಪಕ್ಷದ ಪ್ರಭಾವಿಗಳು ಆಗಮಿಸಿದರೆ ರಸ್ತೆಯುದ್ದಕ್ಕೂ ಫ್ಲೆಕ್ಸ್ ಕಟ್ಟಿ ಸಂಭ್ರಮಿಸುತ್ತಿದ್ದ ಕಾರ್ಯಕರ್ತರು, ಮೋದಿಯವರನ್ನು ಹೆಲಿಪ್ಯಾಡಿನಲ್ಲಿ ಸ್ವಾಗತಿಸಲು ಶಾಸಕ ನಿರಂಜನಕುಮಾರ್ ಹತ್ತು ದಿನಗಳ ಹಿಂದೆಯೇ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಅನುಮತಿ ದೊರಕಲಿಲ್ಲ. ಭದ್ರತೆಯ ದೃಷ್ಟಿಯಿಂದ ಮಾಧ್ಯಮದವರು, ಹಿರಿಯ ಅಧಿಕಾರಿಗಳೂ ಸೇರಿದಂತೆ ಯಾರನ್ನೂ ಹತ್ತಿರಕ್ಕೆ ಸುಳಿಯಲೂ ಬಿಡಲಿಲ್ಲ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಲೂ ಆಗಲಿಲ್ಲ. ಶನಿವಾರ ಸಂಜೆಯಿಂದಲೇ ಊಟಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 181 ಬಂದ್ ಮಾಡಿದ್ದರಿಂದ ಕೇರಳ ರಸ್ತೆಯಲ್ಲಿ ಸಾಗಿ ಗೂಡಲೂರಿನ ಮಾರ್ಗವಾಗಿ ಸಂಚರಿಸಬೇಕಾಯಿತು. ಪಟ್ಟಣದ ಊಟಿ ಸರ್ಕಲ್ ಬಳಿ ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ರಸ್ತೆಗೆ ಗೇಟ್ ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮೋದಿ ಗುಂಡ್ಲುಪೇಟೆಗೆ ಬಂದರೂ ಅವರನ್ನು ಕಾಣುವ ಆಸೆ ಜನರಿಗೆ ಈ ಬಾರಿ ಈಡೇರಲಿಲ್ಲ.