ಚಾಮರಾಜನಗರ: ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮತ್ತು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಇಂಡಿಗನತ್ತಾ, ಮೆಂದಾರೆ ಗ್ರಾಮಗಳ ಸತ್ಯಶೋಧನಾ ವರದಿಯನ್ನು ಸಲ್ಲಿಸಿ ಶೀಘ್ರವಾಗಿ ಕ್ರಮ ವಹಿಸುವಂತೆ ಮನವಿ ಮಾಡಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಪುನರ್ಚಿತ್ ಸಂಸ್ಥೆಯ ಡಾ.ವೀರಭದ್ರ ನಾಯಕ್, ಪಿಯುಸಿಎಲ್ ನ ಎ.ಡಿ.ಸಿಲ್ವ ಹಾಗೂ ಸಿ.ಮಹದೇವಯ್ಯ ಅವರು ಇಂಡಿಗನತ್ತಾ ಗ್ರಾಮದ ಮತಗಟ್ಟೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಯಾರಿಸಿದ್ದ ಸತ್ಯಶೋಧನಾ ವರದಿಯನ್ನು ಸಲ್ಲಿಸಿದರು. ಸಚಿವರಲ್ಲದೇ ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೂ ವರದಿ ಕುರಿತು ಮನವರಿಕೆ ಮಾಡಿಕೊಡಲಾಯಿತು.
ಇದಕ್ಕೆ ಸ್ಪಂದಿಸಿದ ಸಚಿವರು ಹಾಗೂ ಶಾಸಕರು, ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಂಡಿಗನತ್ತಾ ಮತ್ತ ಮೆಂದಾರೆ ಗ್ರಾಮಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ನೀತಿ ಸಂಹಿತೆ ಅವಧಿ ಮುಗಿಯುತ್ತಿದ್ದಂತೆ, ಕುಗ್ರಾಮ ಇಂಡಿಗನತ್ತಾ ಹಾಗೂ ಆದಿವಾಸಿ ಸೋಲಿಗರ ಪೋಡು ಮೆಂದಾರೆಗೆ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಸತ್ಯ ಶೋಧನಾ ವರದಿ:
ಮೂಲಭೂತ ಸೌಲಭ್ಯಗಳಿಗೆ ಆಗ್ರಹಿಸಿ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕುಗ್ರಾಮ ಇಂಡಿಗನತ್ತ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕರಿಸಿದ್ದರು. ಈ ವೇಳೆ ಮತದಾನ ಮಾಡಲು ಬಂದ ಮೆಂದಾರೆಗ್ರಾಮದ ಸೋಲಿಗರ ಮೇಲೆ ಇಂಡಿಗನತ್ತಾ ಗ್ರಾಮದ ಬೇಡಗಂಪಣರು ಹಲ್ಲೆ ನಡೆಸಿ, ಬೂತ್‌ನ ಮೇಲೆ ಆಕ್ರಮಣ ಮಾಡಿ ಇವಿಎಂ ಧ್ವಂಸಗೊಳಿಸಿದ್ದರು. ಘಟನೆಯಲ್ಲಿ, ತಹಸೀಲ್ದಾರ್, ಇನ್ಸ್‌ಪೆಕ್ಟರ್, ಪಿಡಿಒ ಹಾಗೂ ಮೆಂದಾರೆಯ ಬಹಳಷ್ಟು ಗ್ರಾಮಸ್ಥರು ಗಾಯಗೊಂಡಿದ್ದರು. ಇದಕ್ಕೆ ಸಂಬಂಧಸಿದಂತೆ ಮೂರು ಎಫ್‌ಐಆರ್ ದಾಖಲಿಸಲಾಗಿತ್ತು. ಮಹಿಳೆಯರು ಸೇರಿದಂತೆ 46 ಜನರ ಬಂಧನವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿತ್ತು.
ಘಟನೆಯ ಆಳ ಅಗಲ ಅರಿಯಲು ನಾಗವಳ್ಳಿಯ ಪುನರ್ಚಿತ್ ಸಂಸ್ಥೆ ನೇತೃತ್ವದಲ್ಲಿ ಪಿಯುಸಿಎಲ್ ಸೋಲಿಗರ ಅಭಿವೃದ್ಧಿ ಸಂಸ್ಥೆಯವರು ಕುಗ್ರಾಮ ಇಂಡಿಗನತ್ತ, ಹಾಗೂ ಮೆಂದಾರೆ ಆದಿವಾಸಿ ಜನಾಂಗದವರ ಜತೆ ಮಾತನಾಡಿ, ಸಾಕ್ಷಾತ್ ಸಮೀಕ್ಷೆ ನಡೆಸಿ, ಸತ್ಯ ಶೋಧನಾ ವರದಿಯನ್ನು ತಯಾರಿಸಲಾಗಿತ್ತು. ಈಗಾಗಲೇ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗಿತ್ತು.