ಚಾಮರಾಜನಗರ: ನಾಡಹಬ್ಬ ದಸರಾ ಸಂಭ್ರಮದ ವಿಜಯದಶಮಿ ದಿನದಂದು ನಡೆಯುವ ಮೈನವಿರೇಳಿಸುವ ವಜ್ರಮುಷ್ಠಿ ಕಾಳಗದಲ್ಲಿ ನೆತ್ತರು ಹರಿಸಲು ಜಟ್ಟಿಗಳು ಸಿದ್ಧಗೊಂಡಿದ್ದಾರೆ.
ಮೈಸೂರು ರಾಜಮನೆತನದ ಖಾಸಗಿ ದರ್ಬಾರ್‌ನ ಅಧಿಕೃತ ವಜ್ರಮುಷ್ಠಿ ಕಾಳಗಕ್ಕೆ ತನ್ನದೇ ಆದ ಸಾಂಪ್ರದಾಯಿಕ ಮಹತ್ವವಿದೆ. ಸುಮಾರು 400-500 ವರ್ಷಗಳ ಇತಿಹಾಸವನ್ನು ಒಳಗೊಂಡಿರುವ ವಜ್ರಮುಷ್ಠಿ ಕಾಳಗ, ವಿಜಯದಶಮಿಯ ದಿನ ನಡೆಯುವ ಜಂಬೂ ಸವಾರಿಗೂ ಮೊದಲು ರಾಜಮನೆತನದವರ ಸಮ್ಮುಖದಲ್ಲಿ ನಡೆಯುತ್ತದೆ. ಈ ಐತಿಹಾಸಿಕ ವಜ್ರಮುಷ್ಠಿ ಕಾಳಗದಲ್ಲಿ ಬೆಂಗಳೂರು, ಚನ್ನಪಟ್ಟಣ, ಮೈಸೂರು ಮತ್ತು ಚಾಮರಾಜನಗರದ ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ಭಾಗವಹಿಸಲಿದ್ದಾರೆ.
ತಲತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿರುವ ಈ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗವನ್ನು ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಅದರಂತೆ ಈ ಬಾರಿಯ ವಿಜಯದಶಮಿಯ ದಿನದಂದು ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನಿಂದ ಬಲರಾಮ್ ಜಟ್ಟಿ, ಚಾಮರಾಜನಗರದಿಂದ ಶ್ರೀನಿವಾಸ್ ಜಟ್ಟಿ, ಬೆಂಗಳೂರಿನ ನಾರಾಯಣ್ ಜಟ್ಟಿ ಹಾಗೂ ಚನ್ನಪಟ್ಟಣದಿಂದ ರಾಘವೇಂದ್ರ ಜಟ್ಟಿ ಭಾಗವಹಿಸಲಿದ್ದಾರೆ. ಚಾಮರಾಜನಗರದ ಶ್ರೀನಿವಾಸ್ ಜಟ್ಟಿ ಅವರು ರಾಗವೇಂದ್ರ ಜಟ್ಟಿ ಜತೆಗೆ ಹಾಗೂ ಬಲರಾಮ್ ಜಟ್ಟಿ ಅವರು ನಾರಾಯಣ್ ಜಟ್ಟಿ ಅವರೊಂದಿಗೆ ವಜ್ರಮುಷ್ಠಿ ಕಾಳಗದಲ್ಲಿ ಸೆಣಸಾಡಲಿದ್ದಾರೆ.
2 ತಿಂಗಳಿಂದ ತರಬೇತಿ:
ಜಟ್ಟಿ ಜನಾಂಗಕ್ಕೆ ಸೇರಿದ ನಾಲ್ವರು ಪೈಲ್ವಾನರು ವಜ್ರಮುಷ್ಟಿ ಕಾಳಗ ಮಾಡುತ್ತಾರೆ. ಈ ವರ್ಷ ಇಂತಹವರನ್ನು ಕಳುಹಿಸುತ್ತೇವೆ ಎಂದು ರಾಜಮನೆತನಕ್ಕೆ ಮೊದಲೇ ತಿಳಿಸುತ್ತಾರೆ. ದಸರಾ ಆರಂಭಕ್ಕೆ ಒಂದು ಅಥವಾ ಎರಡು ತಿಂಗಳು ಇರುವಾಗ ಆಯ್ಕೆ ಮಾಡಿದವರಿಗೆ ತರಬೇತಿ ನೀಡಲು ಆರಂಭಿಸುತ್ತಾರೆ. ಅಂತೆಯೇ ನಾಲ್ವರು ಜಟ್ಟಿಗಳು ಕಳೆದ 2 ತಿಂಗಳಿಂದಲೂ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈ ತರಬೇತಿಯಲ್ಲಿ ಕಾಳಗದ ನಡೆಗಳನ್ನು ಕಲಿಸಲಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ತರಬೇತಿ ನಡೆಯುತ್ತಲೇ ಇರುತ್ತದೆ. ಕೈಯಲ್ಲಿ ದಂತದ ನಖವನ್ನು ಧರಿಸಿ ಮಾಡುವ ಈ ಹೊಡೆದಾಟದಲ್ಲಿ ಯಾರಾದರೂ ಒಬ್ಬ ಜಟ್ಟಿಯ ತಲೆಯಲ್ಲಿ ರಕ್ತ ಸುರಿಯಲು ಆರಂಭವಾದ ತಕ್ಷಣ ಕಾಳಗವನ್ನು ಮುಕ್ತಾಯ ಮಾಡುವುದು ರೂಢಿಯಿಂದಲೂ ನಡೆದುಕೊಂಡು ಬಂದಿದೆ. ರಾಜು ನಿಷ್ಠೆ ಎಂಬುದು ನಮ್ಮ ಕಣಕಣದಲ್ಲೂ ಇದ್ದು, ಬಹಳ ಹೆಮ್ಮೆಯಿಂದ ಈ ಕಲೆಯನ್ನು ಉಳಿಸಿಕೊಂಡು ಬರಲಾಗುತ್ತಿದೆ ಎಂದು ವಜ್ರಮುಷ್ಠಿ ಅಖಾಡದ ಯಜಮಾನ ಹೇಮಂತ್ ಜಟ್ಟಿ ವಿಜಯವಾಣಿಗೆ ಮಾಹಿತಿ ನೀಡಿದರು.
ಮೂವರು ಅನುಭವಿಗಳು:
ಈ ಬಾರಿಯ ದಸರಾ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಿರುವ ನಾಲ್ವರು ಜಟ್ಟಿಗಳಲ್ಲಿ ಮೂವರು ಪೈಲ್ವಾನರು ಅನುಭವಿಗಳಾಗಿದ್ದಾರೆ. ಚನ್ನಪಟ್ಟಣದ ರಾಘವೇಂದ್ರ ಜಟ್ಟಿ ಇದೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ನಾರಾಯಣ ಜಟ್ಟಿ 9ನೇ ಬಾರಿಗೆ ಈ ಕಾಳಗದಲ್ಲಿ ಭಾಗಿಯಾಗುತ್ತಿರುವುದು ವಿಶೇಷವಾಗಿದೆ. ಇನ್ನು ಉಳಿದಂತೆ ಮೈಸೂರಿನ ಬಲರಾಮ್ ಜಟ್ಟಿ 4ನೇ ಬಾರಿಗೆ ಹಾಗೂ ಚಾಮರಾಜನಗರದ ಶ್ರೀನಿವಾಸ್ ಜಟ್ಟಿ ಅವರು 3ನೇ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಿದ್ದಾರೆ. ಸಾಂಪ್ರದಾಯಿಕ ಉದ್ದೇಶದಿಂದ ಈ ಕಾಳಗ ಕೆಲವೇ ಕ್ಷಣದಲ್ಲಿ ಮಾತ್ರ ನಡೆದರೂ, ರಾಜಮನೆತನದ ಪರಂಪರೆಯಲ್ಲಿ ಈ ವಜ್ರಮುಷ್ಠಿ ಕಾಳಗಕ್ಕೆ ಸಾಕಷ್ಟು ಮಹತ್ವವಿದೆ.
ಜಟ್ಟಿ ಸಮುದಾಯದ ಸಂಪ್ರದಾಯ:
ದಸರಾ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವ ಪೈಲ್ವಾನರು ಜಟ್ಟಿ ಸಮುದಾಯದವರೇ ಆಗಿದ್ದು, ತಳತಲಾಂತರಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ಈ ಬಾರಿಯ ವಜ್ರಕಾಳಗದಲ್ಲಿ ಭಾಗವಹಿಸುತ್ತಿರುವ ಚಾ.ನಗರದ ಜಟ್ಟಿ ಶ್ರೀನಿವಾಸ್ ಅವರ ತಂದೆ ಸೀತಾರಾಮ್ ಜಟ್ಟಿ ಅವರು ಕೂಡ ಸುಮಾರು 10-12 ಬಾರಿ ದಸರಾ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದರು. ಚಾ.ನಗರದಲ್ಲಿ ಜಟ್ಟಿ ಸಮುದಾಯದ 150 ಕ್ಕಿಂತಲೂ ಹೆಚ್ಚು ಕುಟುಂಬಗಳು ಇದ್ದರೂ, ಐದಾರು ಕುಟುಂಬಗಳು ಮಾತ್ರ ಈ ಕಾಳಗದಲ್ಲಿ ಭಾಗಿಯಾಗುತ್ತಾರೆ. ಸುಮಾರು 30 ವರ್ಷಗಳಿಂದ ಪುಟ್ಟಣ್ಣ ಅವರು ಜಟ್ಟಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಯಾವುದೇ ವಯಸ್ಸಿನ ಮಿತಿಯನ್ನು ನೀಡದೆ ಜಟ್ಟಿಯನ್ನು ಆಯ್ಕೆ ಮಾಡಲಾಗುತ್ತದೆ. ದೈಹಿಕವಾಗಿ ಸದೃಢರಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ.
ದಸರಾ ವಜ್ರಮುಷ್ಠಿ ಕಾಳಗದಲ್ಲಿ ಭಾಗಿಯಾಗುವುದು ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ಹಾಗೂ ನಮ್ಮ ಕುಲದೇವರಿಗೆ ಸೇವೆ ಮಾಡಿದಂತೆ ಎಂದು ಭಾವಿಸಿದ್ದೇವೆ. ತುಂಬಾ ಉತ್ಸಾಹದಿಂದ ಮೂರನೇ ಬಾರಿಗೆ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಿದ್ದೇನೆ.-ಶ್ರೀನಿವಾಸ್ ಜಟ್ಟಿ, ಈ ಬಾರಿಯ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವ ಪೈಲ್ವಾನ್, ಚಾಮರಾಜನಗರ ಮೈಸೂರು ರಾಜಮನೆತನದ ನಿಷ್ಠೆ ಹಾಗೂ ವಜ್ರಮುಷ್ಠಿ ಕಾಳಗದ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ನಾವು ಮುನ್ನೆಡೆಯುತ್ತಿದ್ದೇವೆ. ತುಂಬಾ ಸಂತೋಷ ಮತ್ತು ಹೆಮ್ಮೆಯಿಂದ ನಾವು ಇದರಲ್ಲಿ ಭಾಗಿಯಾಗುತ್ತೇವೆ.-ಹೇಮಂತ್ ಜಟ್ಟಿ, ವಜ್ರಮುಷ್ಠಿ ಅಖಾಡದ ಯಜಮಾನ, ಚಾಮರಾಜನಗರ