ಜಿಲ್ಲೆ

ಭೌತಿಕ, ಆರ್ಥಿಕ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಿ

reportermys

ಚಾಮರಾಜನಗರ: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಶೌಚಗೃಹ, ಬೂದುನೀರು, ಕಪ್ಪುನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಾಂಶಗಳ ಭೌತಿಕ ಮತ್ತು ಆರ್ಥಿಕ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಿ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿಯ ಕೆ.ಡಿ.ಪಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸ್ವಚ್ಛ ಭಾರತ್ ಮಿಷನ್ (ಗ್ರಾ) ಮತ್ತು ಜಲಜೀವನ್ ಮಿಷನ್ ಯೋಜನೆಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಚ್ಛ ಸಂಕೀರ್ಣ ಘಟಕ, ಮಲತ್ಯಾಜ್ಯ ನೀರು ನಿರ್ವಹಣೆ ಘಟಕ, ಮಿನಿ ಎಂ.ಆರ್.ಎಫ್ ಘಟಕಗಳನ್ನು ಹೋಬಳಿಗೆ ಒಂದರಂತೆ ನಿರ್ಮಿಸಬೇಕು. ಏಕಬಳಕೆಯ ಪ್ಲಾಸ್ಟಿಕ್‌ಗಳನ್ನು ಪ್ರತಿ ಗ್ರಾಪಂನಿಂದ ಸಂಗ್ರಹಿಸಬೇಕು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಮತ್ತು ಕೆ.ಆರ್.ಐ.ಡಿ.ಎಲ್‌ನಿಂದ ಡಾಂಬರ್ ಖರೀದಿಸಿ ರಸ್ತೆಯ ನಿರ್ಮಾಣಕ್ಕೆ ಬಳಸಿಕೊಳ್ಳಬೇಕೆಂದು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಬ್ಯಾಚ್ 1, 2, 3 4 ರ ಅಡಿಯಲ್ಲಿ ನಿಗದಿತ ಗುರಿ ಅನುಸಾರ ಸಾಧಿಸಿದ ಪ್ರಗತಿ ಬಗ್ಗೆ ನಿರ್ದೇಶಕರು ಅವಲೋಕಿಸಿದರು. ಅಲ್ಲದೆ ವಾರ್ಷಿಕ ಮತ್ತು ಮಾಸಿಕ ಗುರಿಗಳಿಗೆ ಅನುಗುಣವಾಗಿ ಕಾರ್ಯಾತ್ಮಕ ಗೃಹ ನಳ ನೀರು ಸಂಪರ್ಕ ಕಾಮಗಾರಿಗಳ ಪ್ರಗತಿ, ನೀರು ಪರೀಕ್ಷಾ ಲ್ಯಾಬ್‌ಗಳ ಪ್ರಗತಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಪ್ರಗತಿ ಹಾಗೂ ಸಮುದಾಯ ವಂತಿಕೆಯ ಸಂಗ್ರಹಣೆ ಕುರಿತು ತಾಲೂಕುವಾರು ಪ್ರಗತಿ ಪರಿಶೀಲಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೈಸೂರು ವಿಭಾಗೀಯ ಅಧೀಕ್ಷಕ ಎಂ.ಎಸ್ ಕೃಷ್ಣಮೂರ್ತಿ ಜಲಜೀವನ್ ಮಿಷನ್ ಯೋಜನೆಯ ತಾಂತ್ರಿಕ ಅಂಶಗಳನ್ನು ಸಭೆಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಸಿಇಒ ಕೆ.ಎಂ.ಗಾಯತ್ರಿ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ನೋಡಲ್ ಅಧಿಕಾರಿ ಕೆ.ಬಿ. ಪ್ರಭುಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗಂಗಾಧರಯ್ಯ ಇತರರು ಹಾಜರಿದ್ದರು.