ಚಾಮರಾಜನಗರ: ಕೌಶಲ ಆಧಾರಿತ ಕೋರ್ಸ್‌ಗಳಿಗೆ ಆದ್ಯತೆ ನೀಡುವುದರ ಜತೆಗೆ, ಉದ್ಯೋಗ ಸೃಷ್ಟಿಸುವ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕಾಲೇಜುಗಳು ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಅಧ್ಯಕ್ಷ ವೆಂಕಟಾಚಲಂ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2ನೇ ದಿನ ಭೇಟಿ ನೀಡಿ, ಕಾಲೇಜಿನ ಕ್ರೈಟಿರಿಯಾ ದಾಖಲೆಯನ್ನು ಸಮಗ್ರವಾಗಿ ಪರಿಶೀಲಿಸಿ ಕೊನೆ ಹಂತದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಭಾಗದಲ್ಲಿ ಶೇ.60-70 ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದು ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ಅನಿವಾರ್ಯವಾಗಿರುತ್ತದೆ. ಆದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿರುವುದು ಕಂಡುಬರುತ್ತಿದೆ. ಇದೇ ಮೊದಲ ಬಾರಿಗೆ ಈ ಕಾಲೇಜು ನ್ಯಾಕ್ ಕಮಿಟಿಯ ಚಕ್ರಕ್ಕೆ ಸೇರುತ್ತಿದೆ. ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ತುಂಬಾ ಉತ್ತಮ ಪ್ರಯತ್ನ ಮಾಡುತ್ತಿದೆ. ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಮುಂದಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಈ ಭಾಗದಲ್ಲಿ ಸಸ್ಯ ಸಂಪನ್ಮೂಲ ಹೆಚ್ಚಾಗಿ ಇದ್ದು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಸ್ಯಶಾಸ, ಮೆಕಾನಿಕಲ್ ಹಾಗೂ ಕೌಶಲ ಆಧಾರಿತ ಕೋರ್ಸ್‌ಗಳನ್ನು ತೆರೆಯುವ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ಹೆಚ್ಚು ಉದ್ಯೋಗ ಅವಕಾಶ ಸೃಷ್ಟಿಸುವ ವಾತಾವರಣವನ್ನು ನಿರ್ಮಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಜ್ಞಾನ ವಿಕಾಸದ ಜತೆಗೆ ಬದುಕು ರೂಪಿಸು ಶಿಕ್ಷಣ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಪೂರಕ ವಾತಾವರಣ ಇದೆ. ಹೆಣ್ಣು ಮಕ್ಕಳು ಹೆಚ್ಚು ಶಿಕ್ಷಣ ಕಲಿತರೆ ಇಡೀ ಸಮಾಜವೇ ಉತ್ತಮದಾರಿಯಲ್ಲಿ ಸಾಗುತ್ತದೆ ಎಂದು ತಿಳಿಸಿದರು.
ಕಮಿಟಿ ಸದಸ್ಯೆ ಸ್ವಾರಿಕಾ ಶರ್ಮಾ, ಸೀನಾಜಾರ್ಜ್, ಐಕ್ಯೂಎಸ್‌ಇ ಸಂಯೋಜಕ ಬಾಲಸುಬ್ರಮ್ಮಣ್ಯಂ, ಪ್ರಾಂಶುಪಾಲೆ ಸುಮತಿ, ಕನ್ನಡ ವಿಭಾಗದ ಮುಖ್ಯಸ್ಥೆ ರುಕ್ಮಿಣಿ, ಸಹಾಯಕ ಪ್ರಾಧ್ಯಾಪಕ ಜಯಣ್ಣ, ಮಂಜುನಾಥ್, ಸಿದ್ದರಾಜು, ಪ್ರಭಾವತಿ, ಗುರುರಾಜ್ ಯರಗನಹಳ್ಳಿ, ಬಸವಣ್ಣ ಮೂಕಳ್ಳಿ, ದೇವರಾಜ್ ಇತರರು ಹಾಜರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಇದೇ ವೇಳೆ ವಿದ್ಯಾರ್ಥಿನಿಯರು ನಡೆಸಿಕೊಟ್ಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಡೊಳ್ಳು ಕುಣಿತ, ಪೂಜಾ ಕುಣಿತ, ಕೋಲಾಟ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನ್ಯಾಕ್ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.