ಜಿಲ್ಲೆ

ಚಾಮರಾಜನಗರ ವಿ.ವಿ.ಯಲ್ಲಿ ಸುವರ್ಣೋತ್ಸವ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ವಿದ್ಯಾರ್ಥಿಗಳು ಕಸದಿಂದ ರಸ ತಯಾರಿಸಿದರು, ಭಿತ್ತಿಪತ್ರಗಳ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಅನಾವರಣಗೊಳಿಸಿದರು. ಸುವರ್ಣ ಸಂತೆಯಲ್ಲಿ ಪಾಲ್ಗೊಂಡು ಸುವರ್ಣೋತ್ಸವಕ್ಕೆ ಮೆರುಗು ತುಂಬಿದರು.

ನಗರದ ಹೊರವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಅಂತರ ಕಾಲೇಜು ಸ್ಪರ್ಧೆ, ಸುವರ್ಣ ಉತ್ಸವ-2023 ಕಾರ್ಯಕ್ರಮದಲ್ಲಿ ಭಿತ್ತಿಪತ್ರ ತಯಾರಿಕೆ, ಕಸದಿಂದ ರಸ, ಸುವರ್ಣಸಂತೆ, ಮಾದರಿ ಪ್ರಸ್ತುತಿ ಹಾಗೂ ಕಿರುಚಿತ್ರ ತಯಾರಿಕೆ ಎಂಬ 5 ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಸುವರ್ಣ ಉತ್ಸವದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಜೆಎಸ್‌ಎಸ್ ಮಹಿಳಾ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಇನ್ನಿತರ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮೊಳಗಿನ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಕುಲಸಚಿವ ಪ್ರೊ.ಮಾದೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಬಹುಮುಖ್ಯವಾಗುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದನ್ನು ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣ ಮಾಡಬೇಕು. ಪ್ರತಿಯೊಬ್ಬರಲ್ಲೂ ಯಾವುದಾರೊಂದು ಪ್ರತಿಭೆ ಇದ್ದೆ ಇರುತ್ತದೆ. ಅದಕ್ಕೆ ಸೂಕ್ತವಾದ ವೇದಿಕೆ ಬೇಕಾಗುತ್ತದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅತ್ಯಂತ ಸಹಕಾರಿ ಎಂದು ತಿಳಿಸಿದರು.

ಅಭಿವೃದ್ಧಿ ಮಂಡಳಿ ನಿರ್ದೇಶಕ ಆರ್.ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ಪರಿಶ್ರಮ ಹೊಂದಿದ್ದರೆ ಯಶಸ್ಸು ಖಂಡಿತವಾಗಿ ಲಭಿಸುತ್ತದೆ. ವಿದ್ಯಾಭ್ಯಾಸದ ಜತೆ ಕ್ರೀಡೆ, ಸಾಂಸ್ಕೃತಿಕವಾಗಿ ಸಕ್ರಿಯವಾಗಿ ಭಾಗವಹಿಸಿ. ಸಾಕಷ್ಟು ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆ ಇರುತ್ತದೆ. ಕೆಲವರು ಧೈರ್ಯದಿಂದ ಪ್ರದರ್ಶನ ಮಾಡಿದರೆ, ಕೆಲವರು ಹಿಂಜರಿಕೆ ಮನೋಭಾವದಿಂದ ತಮ್ಮ ಪ್ರತಿಭೆಯನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆ ಇಲ್ಲದೆ ತಮ್ಮೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಈ ವೇದಿಕೆಯನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಕರೆ ನೀಡಿದರು.

ರಾಷ್ಟ್ರೀಯ ಸೇವಾ ಯೋಜನೆ ಜಿಲ್ಲಾ ಸಂಯೋಜಕ ಅಧಿಕಾರಿ ಎಂ.ಬಿ.ಡಾ.ಮಹೇಶ್, ಉಪನ್ಯಾಸಕ ಬಸವಣ್ಣ ಮೂಕಳ್ಳಿ, ಚೇತನ್, ಡಾ.ಮಾದೇವಮೂರ್ತಿ, ಎಸ್.ರಾಘವೇಂದ್ರ, ಶಿವರಾಜ್, ಡಾ.ಲಿಂಗರಾಜು, ರಮೇಶ್, ನಿಂಗರಾಜು, ಉಪನ್ಯಾಸಕಿ ಶ್ವೇತ, ರಾಣಿ, ಹಾಜೀರ, ಭವ್ಯ, ಭಾಗ್ಯ, ಕವಿತಾ, ಶಾಲಿನಿ, ನಿಕಿತಾ, ದಿವ್ಯ ಉಪಸ್ಥಿತರಿದ್ದರು.

ಭಿತ್ತಿಪತ್ರ ತಯಾರಿಕೆಯಲ್ಲಿ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಸಾಮಾಜಿಕ ಜಾಗೃತಿ ಅನಾವರಣಗೊಂಡಿತು. ಬೆಂಕಿಪೊಟ್ಟಣದಿಂದ ಡೈನಿಂಗ್ ಟೇಬಲ್, ಲಗ್ನಪತ್ರಿಕೆಯಲ್ಲಿ ಮನೆ ನಿರ್ಮಾಣ ಮಾಡಿ ವಿದ್ಯಾರ್ಥಿಗಳು ಗಮನ ಸೆಳೆದರು. ಸುವರ್ಣ ಸಂತೆಯಲ್ಲಿ ವಿವಿಧ ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡಿದರು. ಮಾದರಿ ಪ್ರಸ್ತುತಿಯಲ್ಲಿ ವೈಜ್ಞಾನಿಕತೆಗೆ ಒತ್ತು ನೀಡಲಾಗಿತ್ತು. ಹಲವು ವಿದ್ಯಾರ್ಥಿಗಳು ಕಿರು ಚಿತ್ರಗಳನ್ನು ತಯಾರಿಸಿ ತಮ್ಮ ಪ್ರತಿಭೆಗೆ ಶಹಬ್ಬಾಷ್‌ಗಿರಿ ಗಿಟ್ಟಿಸಿದರು.