ಚಾಮರಾಜನಗರ: ತಾಲೂಕಿನ ಅಮಚವಾಡಿಯ ಚೆನ್ನಪ್ಪನಪುರದ ಗುಡ್ಡದ ಮಠದ ಶ್ರೀ ವೀರಭದ್ರೇಶ್ವರ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ಮೇರೆಗೆ ವಸತಿ, ಮೂಲಸೌಕರ್ಯ ಕಲ್ಪಿಸಿ ಜೀರ್ಣೋದ್ಧಾರಗೊಳಿಸುವ ಸಂಬಂಧ ಹಿರಿಯ ಅಧಿಕಾರಿಗಳು, ವಾಸ್ತು ತಜ್ಞರು, ಇಂಜಿನಿಯರ್‌ಗಳ ತಂಡ ಸೋಮವಾರ ಭೇಟಿ ನೀಡಿ ಪರಿಶೀಲಿಸಿತು.
ಅಭಿವೃದ್ಧಿ ಕಾರ್ಯ ಸಂಬಂಧ ಭಾನುವಾರ ದೇವಾಲಯದ ಸೇವಾ ಸಮಿತಿ ಅಧ್ಯಕ್ಷರು, ಸದಸ್ಯರು ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಸಚಿವರು ವಾಸ್ತು ಇಂಜಿನಿಯರ್, ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜೀರ್ಣೋದ್ದಾರ ಕಾರ್ಯ ಸಂಬಂಧ ಪರಿಶೀಲಿಸಿ ಕೈಗೊಳ್ಳಬೇಕಿರುವ ಕೆಲಸಗಳ ಕುರಿತು ವರದಿ ಸಲ್ಲಿಸಿ ಕ್ರಮವಹಿಸಲು ನಿರ್ದೇಶನ ನೀಡಿದ್ದರು.
ಸಚಿವರ ಆದೇಶದಂತೆ ಉಪವಿಭಾಗಾಧಿಕಾರಿ ಗೀತಾ ಹುಡೇದ, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ವಿನಯ್ ಕುಮಾರ್, ತಹಸೀಲ್ದಾರ್ ಬಸವರಾಜು, ಸಚಿವರ ವಿಶೇಷಾಧಿಕಾರಿ ಸ್ವಾಮಿ, ಬೆಂಗಳೂರಿನ ವಾಸ್ತುತಜ್ಞ ಚಿದಾನಂದ, ಶಿಲ್ಪಿ ರಾಜಶೇಖರ್ ದೇವಾಲಯಕ್ಕೆ ಭೇಟಿ ನೀಡಿದ್ದರು.
ಸ್ಥಳೀಯ ಮುಖಂಡರು, ದೇವಾಲಯದ ಸೇವಾ ಸಮಿತಿ ಅಧ್ಯಕ್ಷರು, ಅರ್ಚಕರು, ಗ್ರಾಮದ ಹಿರಿಯರೊಂದಿಗೆ ಮಾಹಿತಿ ಪಡೆದುಕೊಂಡರು. ದೇವಾಲಯದ ಒಳ ಆವರಣ, ಹೊರ ಆವರಣ, ಸುತ್ತುಗೋಡೆ, ದೇವಾಲಯದ ಕಳಶಗಳು, ಗೋಪುರ, ಕೆತ್ತನೆ ಹಾಗೂ ಇತರೆ ಭಾಗಗಳನ್ನು ತಂಡ ಪರಿಶೀಲಿಸಿತು. ಕೈಗೊಳ್ಳಬೇಕಿರುವ ಕಾರ್ಯಗಳನ್ನು ಪಟ್ಟಿ ಮಾಡಿಕೊಂಡರು. ದೇವಾಲಯದ ಸೇವಾ ಸಮಿತಿ ಪ್ರಮುಖರಾದ ಶ್ರೀಕಾಂತ ಅರಸ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ದಯಾನಿಧಿ, ರಾಜಣ್ಣ, ಕೊಂಗಳ್ಳಿಶೆಟ್ಟಿ, ಗೋಪಾಲಶೆಟ್ಟಿ ಇತರರಿದ್ದರು.