ಜಿಲ್ಲೆ

ಸಮಾನತೆ, ಸಹಬಾಳ್ವೆ ಸೇವಾದಳದ ಧ್ಯೇಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಸೇವಾದಳ ಎಂದರೆ ದೇಶಪ್ರೇಮ, ರಾಷ್ಟ್ರಭಕ್ತಿ, ಶಿಸ್ತು, ತ್ಯಾಗ ಎಂದೇ ಅರ್ಥ ಎಂದು ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ಹೇಳಿದರು.

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಭಾರತ ಸೇವಾದಳ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಶಿಕ್ಷಕರಿಗೆ ಆಯೋಜಿಸಿದ್ದ ಒಂದು ದಿನದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಸೇವಾದಳದ ಚಟುವಟಿಕೆಗಳು ಹೆಚ್ಚುತ್ತಾ ಹೋಗಬೇಕು. ಇದರಿಂದ ಸಮಾಜದಲ್ಲಿ ಭಾವೈಕ್ಯ ಮೂಡುತ್ತದೆ. ಮಕ್ಕಳಲ್ಲಿ ಸಮಾನತೆ, ಸಹಬಾಳ್ವೆಯನ್ನು ಸೇವಾದಳ ಕಲಿಸುತ್ತದೆ ಎಂದರು.

ನವೆಂಬರ್ ತಿಂಗಳಿನಲ್ಲಿ ‘ಮಕ್ಕಳ ಹಬ್ಬ’ ಅಂಗವಾಗಿ ಚಾಮರಾಜನಗರದಲ್ಲಿ ಭಾರತ ಸೇವಾದಳದಿಂದ ಮಕ್ಕಳ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಶ್ರಮಿಸಿದ ಇಸ್ರೋ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನು ಭಾರತ ಸೇವಾದಳದ ಪರವಾಗಿ ಅಭಿನಂದಿಸಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪ ನಿರ್ದೇಶಕ ಕಾಶೀನಾಥ್ ಮಾತನಾಡಿ, ಡಾ.ನಾ. ಸು .ಹರ್ಡೀಕರ್ ಸ್ಥಾಪಿಸಿದ ಭಾರತ ಸೇವಾದಳ ‘ಸೇವೆಗಾಗಿ ಬಾಳು’ ಎಂಬ ಧ್ಯೇಯವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಮಾನವೀಯತೆ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ಎಳೆಯ ಮಕ್ಕಳಲ್ಲಿ ರಾಷ್ಟ್ರೀಯ ಭಾವೈಕ್ಯ ಸಂದೇಶವನ್ನು ತುಂಬಿ ಅವರನ್ನು ಭಾರತದ ಆದರ್ಶ ನಾಗರಿಕರನ್ನಾಗಿ ಪರಿವರ್ತಿಸುವಲ್ಲಿ ಭಾರತ ಸೇವಾದಳದ ಕಾರ್ಯ ಅನುಪಮವಾದದ್ದು ಎಂದರು.

ಕಾರ್ಯಾಗಾರದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮೋಹನ್ ಕುಮಾರ, ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ನಾಗರಾಜ್, ಕೋಶಾಧ್ಯಕ್ಷ ಪ್ರಸಾದ್, ಅಧಿನಾಯಕ ನಾಗಣ್ಣ , ಶಾಖಾ ನಾಯಕಿ ಜ್ಯೋತಿ, ಜಿಲ್ಲಾ ಸಂಘಟಕ ಈ.ಅರುಣ್ ಹಾಗೂ ತಾಲೂಕಿನ ಶಿಕ್ಷಕರು ಭಾಗವಹಿಸಿದ್ದರು.