ಚಾಮರಾಜನಗರ: ಕಾಯಕ ಸಮಾಜಗಳನ್ನು ಒಗ್ಗೂಟಿಸುವ ಜತೆಗೆ, ಅವರಲ್ಲಿ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ಚಿತ್ರದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ವೆಂಕಟಯ್ಯನಛತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂಕ ಸ್ಥಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ 4500ಕ್ಕೂ ಹೆಚ್ಚು ಜಾತಿಗಳಿವೆ. ಅವೆಲ್ಲವನ್ನು ಮನುಷ್ಯರಾದ ನಾವೇ ಸೃಷ್ಟಿ ಮಾಡಿರುವುದು. ಕಾಯಕದ ಆಧಾರದ ಮೇಲೆ ಜಾತಿ ಮಾಡಲಾಯಿತು. ಆದರೆ, ಬಸವಾದಿ ಶರಣರು ಎಲ್ಲ ವೃತ್ತಿ ಮಾಡುವ ಸಮಾಜಗಳಿಗೆ ಕಾಯಕ ಸಮಾಜ ಎಂದು ಹೇಳಿದರು.
12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿ, ಕಾಯಕ ಸಮಾಜಗಳನ್ನು ಗುರುತಿಸಿ ಅವರಿಗೂ ಸೂಕ್ತ ಸ್ಥಾನವನ್ನು ಕಲ್ಪಿಸುವ ಕೆಲಸ ಪ್ರಾಮಾಣಿಕವಾಗಿ ನಡೆಯಿತು. ಉಪ್ಪಾರ ಸಮಾಜ ದೇಶಕ್ಕೆ ಉಪ್ಪು ನೀಡುವಂತಹ ಕಾಯಕದಲ್ಲಿ ನಿರತವಾಗಿತ್ತು. ಮಡಿವಾಳ ಸಮಾಜ ಬಟ್ಟೆಯ ಕೊಳೆಯನ್ನು ತೊಳೆಯುವ ಜೊತೆಗೆ ಮನಸ್ಸಿನ ಕೊಳೆಯನ್ನೂ ತೊಳೆಯುತ್ತಿತ್ತು. ದೇವಾಂಗ ಸಮಾಜ ಬಟ್ಟೆ ನೇಯುವ ಕಾಯಕದಲ್ಲಿ ತೊಡಗಿತ್ತು. ಅಂದು ಆ ಸಮಾಜ ಬಟ್ಟೆಯನ್ನು ನೇಯದಿದ್ದರೆ ನಮ್ಮ ಪರಿಸ್ಥಿತಿ ಏನಾಗುತ್ತಿತ್ತು? ದೇವಾಂಗ ಸಮಾಜ ಗೌರವನ್ನು ತಂದು ಕೊಟ್ಟಿದೆ. ಇಂತಹ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸುವ ಕೆಲಸವಾಗಬೇಕಾಗಿದೆ ಎಂದರು.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ವೆಂಕಟಯ್ಯನಛತ್ರ ಗ್ರಾಮದಲ್ಲಿ ಎಲ್ಲ ಸಮಾಜದ ಬಂಧುಗಳು ಸೇರಿ ಒಗ್ಗಟ್ಟಿನಿಂದ ಅಂಕ ಸ್ಥಾಪನೆ ಮಾಡಿರುವುದು ಶುಭ ಸೂಚನೆ. ಎಲ್ಲರೂ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ದುಡಿಯಬೇಕಾಗಿದೆ ಎಂದರು. ಗ್ರಾಮದ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಿದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಕಳೆದ 15 ವರ್ಷಗಳಿಂದ ಕ್ಷೇತ್ರದ ಶಾಸಕನಾಗಿ ಎಲ್ಲ ವರ್ಗದ ಜನರಿಗೆ ಸರ್ಕಾರದ ಸಲವತ್ತುಗಳನ್ನು ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಉಪ್ಪಾರ ಸಮುದಾಯದ ಭವನ ನಿರ್ಮಾಣ ಮಾಡಲು 30 ಲಕ್ಷ ರೂ. ಮಂಜೂರು ಮಾಡಲಾಗಿದೆ. ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.