ಜಿಲ್ಲೆ

ನೀರು ಹರಿಸಿದ ಸರ್ಕಾರದ ವಿರುದ್ಧ ಪ್ರತಿಭಟನೆ

ಚಾಮರಾಜನಗರ : ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.

ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಹಳೇ ರೇಷ್ಮೆ ಮಾರುಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು ವಾಹನ ಸಂಚಾರ ತಡೆದು, ರಾಜ್ಯ ಸರ್ಕಾರದ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ರೈತರ ಮೇಲೆ ಚೂರಾದರು ಕಾಳಜಿ ಇದ್ದರೆ, ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಾಧೀಕರಣದ ಮುಂದೆ ರಾಜ್ಯದ ವಸ್ತು ಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನು ಮಾಡದೆ ಏಕಾಏಕಿ ರಾಜ್ಯದ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕುಸಿತವಾಗಿದೆ, ಅಣೆಕಟ್ಟೆಗಳು ಖಾಲಿಯಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಜತೆಗೆ ಚರ್ಚೆ ಮಾಡಿ ಕಾಲುವೆಗೆ ನೀರು ಹರಿಸಿ, ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕಿತ್ತು. ಆದರೆ ತಮಿಳುನಾಡಿಗೆ ನೀರು ಹರಿಸು ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ರಾಜ್ಯ ರೈತರಿಗೆ ಅನ್ಯಾಯವೆಸಗಿದ್ದಾರೆ ಎಂದು ದೂರಿದರು.

ಈಗ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರಲ್ಲ, ಮೈಸೂರು ಭಾಗದ 5 ಜಿಲ್ಲೆಗಳ ರೈತರ ರಕ್ತವನ್ನು ಹರಿಸುತ್ತಿದೆ. ಈ ರಕ್ತವನ್ನು ಕೊಡಲು ನಾವು ತಯಾರಿಲ್ಲ. ಅನ್ನಭಾಗ್ಯದ ಯೋಜನೆಗೆ ಅಕ್ಕಿ ಇಲ್ಲ ಎಂದು ಬೇರೆ ರಾಜ್ಯಗಳಿಗೆ ಹೋಗಿ ಬೇಡುತ್ತಿದ್ದೀರಿ, ಇಲ್ಲಿನ ರೈತರಿಗೆ ನೀರು ಕೊಟ್ಟಿದ್ದರೆ ನಾವು ಭತ್ತ ಬೆಳೆಯುತ್ತಿರಲಿಲ್ಲವೇ? ಹಿಂದಿನ ವರ್ಷ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಯಿತು, ನಾವು ನೀರನ್ನು ತಡೆಯಲಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಮಾತನಾಡುವ ಸರ್ಕಾರ ಅದನ್ನು ಮಾಡಲು ತಯಾರಿಲ್ಲದೆ ನೀರು ಹರಿಸುವ ಕೆಲಸ ಮಾಡುತ್ತಿದೆ. ಈ ಕೂಡಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ರೈತ ಮುಖಂಡ ಹೊನ್ನೂರು ಬಸವಣ್ಣ ಮಾತನಾಡಿ, ಒಂದು ವಾರದಲ್ಲಿ ಮಳೆಯಾಗಲಿಲ್ಲ ಅಂದರೆ ರಾಜ್ಯದ ಜನರಿಗೆ ಕುಡಿಯಲು ಸಹ ನೀರು ಇರುವುದಿಲ್ಲ. ಇದು ಮುಂದುವರಿದರೆ ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಮಹದೇವಸ್ವಾಮಿ, ಹಾಲಿನ ನಾಗರಾಜು, ಪಟೇಲ್ ಶಿವಮೂರ್ತಿ, ಹೆಗ್ಗೊಠಾರ ಮಹೇಶ್, ಮಹೇಂದ್ರ, ಚೆನ್ನಪ್ಪ, ಮಂಜುನಾಥ್, ಗುರುಮಲ್ಲಪ್ಪ, ಮಹದೇವಸ್ವಾಮಿ, ರೇವಣ್ಣ, ಮಂಜು, ಮಹೇಂದ್ರ, ನಟೇಶ್ ಹಾಗೂ ಇತರರು ಭಾಗವಹಿಸಿದ್ದರು.

ರೈತರ ಬಂಧನ, ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುತ್ತಿದ್ದ ರೈತರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲಕಾಲ ಪೊಲೀಸರು ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ರೈತರು ಪ್ರತಿಭಟನೆ ಕೈಬಿಡಲು ನಿರಾಕರಿಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ಬಂಧಿಸಿ ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಸುಮಾರು ಅರ್ಧತಾಸಿಗಿಂತಲೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದ ಪರಿಣಾಮವಾಗಿ 1 ಕಿ.ಮೀ ಗಿಂತಲೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು.