ಚಾಮರಾಜನಗರ:ವಿದ್ಯುತ್ ದರ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಹಾಗೂ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ಯಾವುದೇ ಷರತ್ತು ಹಾಕಬಾರದು ಎಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ವತಿಯಿಂದ ತಮಟೆ ಚಳವಳಿ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಕರ್ನಾಟಕ ಸೇನಾ ಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಭಾನುವಾರ ಸಮಾವೇಶಗೊಂಡ ಪ್ರತಿಭಟನಾನಿರತರು, ಇಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ದರ ದುಪ್ಪಟ್ಟು ಹೆಚ್ಚಳ ಮಾಡಿರುವುದರಿಂದ ಕೈಗಾರಿಕೆಗಳು ಮುಚ್ಚುವಂತಾಗಿದೆ. ಜನಸಾಮಾನ್ಯರಿಗೆ ಹೊರೆಯಾಗಿದೆ. ಕೂಡಲೇ ವಿದ್ಯುತ್ ದರ ಹೆಚ್ಚಳ ನಿರ್ಧಾರ ಕೈ ಬಿಡಬೇಕು ಹಾಗೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಷರತ್ತು ವಿಧಿಸದೆ ಯಥಾವತ್ತಾಗಿ ಜಾರಿ ಮಾಡುವ ಮೂಲಕ ಗೊಂದಲ ಸರಿಪಡಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ನಮ್ಮ ಸಂಘಟನೆ ವತಿಯಿಂದ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಶಾ.ಮುರಳಿ, ನಿಜಧ್ವನಿ ಗೋವಿಂದರಾಜು, ಗು.ಪುರುಷೋತ್ತಮ್, ಪಣ್ಯದಹುಂಡಿ ರಾಜು, ಚಾ.ವೆಂ.ರಾಜ್‌ಗೋಪಾಲ್, ಕುಮಾರಸ್ವಾಮಿ, ಮಹದೇವನಾಯಕ, ಶಿವಶಂಕರನಾಯಕ, ಲಿಂಗರಾಜು, ಚಂದ್ರಕುಮಾರ್, ಇತರರು ಇದ್ದರು.