ಚಾಮರಾಜನಗರ: ಕೊಳ್ಳೇಗಾಲ ತಾಲೂಕು ಕುಂತೂರಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ನಗರದಲ್ಲಿ ಸೋಮವಾರ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲದಿಂದ ಬೈಕ್ ರ‌್ಯಾಲಿ ಮೂಲಕ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿದ ಪ್ರತಿಭಟಕಾರರು, ಕಾರ್ಖಾನೆಯ ಆಡಳಿತ ಮಂಡಳಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕಾರ್ಖಾನೆಯವರು ರೈತರಿಂದ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದಾರೆ. ಒಪ್ಪಿಗೆಯಂತೆ 11ರಿಂದ 14 ತಿಂಗಳ ಒಳಗಡೆ ಕಬ್ಬಿನ ಕಟಾವು ಮಾಡಬೇಕಾಗಿರುತ್ತದೆ. ಆದರೆ ಕಾರ್ಖಾನೆಯು ಕಬ್ಬನ್ನು ಮನಬಂದಂತೆ ಕಟಾವು ಮಾಡಿದೆ. 19 ರಿಂದ 20 ತಿಂಗಳಲ್ಲಿ ಕಬ್ಬು ಕಟಾವು ಆಗಿಲ್ಲ ಎಂದು ದೂರಿದರು.
ಆಡಳಿತ ಮಂಡಳಿ ಮತ್ತು ಕಾರ್ಮಿಕರ ಮಧ್ಯೆ ವೇತನ ವಿಚಾರದಲ್ಲಿ ಹೋರಾಟ ಪ್ರಾರಂಭವಾಗಿ ರೈತರಿಗೆ ತುಂಬ ತೊಂದರೆಯಾಗಿದೆ. ಕಾರ್ಮಿಕರಿಂದ ಕಟಾವು ಮಾಡಿಸಿ 12 ರಿಂದ 15 ಸಾವಿರ ಟನ್ ಕಬ್ಬು ರೈತರ ಜಮೀನು, ರಸ್ತೆ, ಕಾಲುವೆ ಬದಿಗಳಲ್ಲಿ ಬಿದ್ದು ಒಣಗುತ್ತಿವೆ. ಈ ಕುರಿತು ಹಲವು ಬಾರಿ ಆಡಳಿತ ಮಂಡಳಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಗೀತಾ ಹುಡೇದಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ಆರೋಪಿಸಿದರು. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಶರವಣ, ಕಬ್ಬು ಅಧಿಕಾರಿ ಮಹದೇವಪ್ಪ, ರೈತರೊಂದಿಗೆ ಮನಬಂದಂತೆ ವರ್ತಿಸುತ್ತಿದ್ದಾರೆ. ಕಬ್ಬು ಸಾಗಿಸಲು ಹೋದ ರೈತರಿಗೆ ಕಾರ್ಖಾನೆಯಿದ್ದರೆ ರೈತ, ರೈತನಿಂದ ಕಾರ್ಖಾನೆಯಿಲ್ಲ ಎಂದು ಉಡಾೆಯಿಂದ ವರ್ತಿಸುತ್ತಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಈ ನಷ್ಟವನ್ನು ಕಾರ್ಖಾನೆಯವರಿಂದ ರೈತರಿಗೆ ಜಿಲ್ಲಾಡಳಿತ ಭರಿಸಬೇಕೆಂದು ಒತ್ತಾಯಿಸಿದರು.
ರೈತರಿಗೆ ಬೆಲೆ ಕೊಡದ ಶರವಣ ಮತ್ತು ಮಹದೇವಪ್ಪ ಅವರನ್ನು ವರ್ಗಾವಣೆ ಮಾಡಬೇಕು. 14 ತಿಂಗಳ ಅವಧಿ ಮೀರಿದ ಕಬ್ಬಿಗೆ ಆಗಿರುವ ನಷ್ಟವನ್ನು ಭರಿಸಬೇಕು. ಒಣಗಿರುವ ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಕಬ್ಬಿನ ಕಟಾವು ವೆಚ್ಚವನ್ನು ವರ್ಷದ ಎಲ್ಲ ತಿಂಗಳಲ್ಲೂ ಸಮಾನವಾಗಿ ನಿಗದಿ ಮಾಡಬೇಕು. ಕಾರ್ಖಾನೆಯವರು ಸರ್ಕಾರಕ್ಕೆ ನೀಡುತ್ತಿರುವ ಸಕ್ಕರೆ ಇಳುವರಿ ವರದಿಯಲ್ಲಿ ರೈತರಿಗೆ ಮಾಡುತ್ತಿರುವ ಮೋಸವನ್ನು ನಿಲ್ಲಿಸಬೇಕು. ಎ್ಆರ್‌ಪಿ ನಿಗದಿಯಾದ ಮೇಲೆ ಕಾರ್ಖಾನೆಯಲ್ಲಿ ರೈತರಿಗೆ ಮಾಡುತ್ತಿರುವ ವಂಚನೆಯನ್ನು ಸರ್ಕಾರ ನ್ಯಾಯಾಂಗ ತನಿಖೆ ಮಾಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್‌ಗೆ ಮನವಿ ಸಲ್ಲಿಸಿದರು. ಮುಖಂಡರಾದ ನಂಜುಂಡಸ್ವಾಮಿ, ಲೋಕೇಶ್, ಶಿವಸ್ವಾಮಿ, ಮಹದೇವಸ್ವಾಮಿ, ಮಹದೇವಪ್ಪ, ಬಾಬು, ಪಾಷ, ಶಶಿಕಾಂತೇಗೌಡ, ಜವರನಾಯಕ, ನಾಗರಾಜು, ಸುಬ್ಬಣ್ಣ ಮತ್ತು ಇತರರು ಭಾಗವಹಿಸಿದ್ದರು