ಗುಂಡ್ಲುಪೇಟೆ: ಕಟಾವಿನ ಸಂದರ್ಭದಲ್ಲಿಯೂ ಬೆಲೆ ಏರದ ಅರಿಶಿಣಕ್ಕೆ ಬೆಂಬಲ ಬೆಲೆ ಘೋಷಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ಅವರು ಗುರುವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆ ಹಾಗೂ ತಾಲೂಕಿನಲ್ಲಿ ಹೆಚ್ಚು ಅರಿಶಿಣ ಬೆಳೆಯುತ್ತಿದ್ದು, ಸದ್ಯ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸದ್ಯ ಅರಿಶಿಣ ಕಟಾವು ಮಾಡುತ್ತಿದ್ದು, ಬೆಲೆ 5 ಸಾವಿರದಿಂದ 6 ಸಾವಿರ ಇದ್ದು ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಅಲ್ಲದೆ ಕೇಂದ್ರ ಸರ್ಕಾರದ ಎಂ.ಎಸ್.ಪಿ. ಮಾರ್ಗಸೂಚಿ ಅನ್ವಯ ಪ್ರತಿ ಎಕರೆ ಅರಿಶಿಣ ಬೆಳೆಯಲು 1 ಲಕ್ಷ 90 ಸಾವಿರ ರೂ. ವೆಚ್ಚವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ ಈಗ ಮಾರುಕಟ್ಟೆಯಲ್ಲಿ ಇರುವ ಬೆಲೆಯು ಅತ್ಯಂತ ಕಡಿಮೆಯಾಗಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಎಂಐಎಸ್ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೆ ತಂದು ಪ್ರತಿ ಕ್ವಿಂಟಾಲ್ ಅರಿಶಿಣಕ್ಕೆ 17,500 ರೂ.ಗಳನ್ನು ಬೆಂಬಲ ಬೆಲೆಯಾಗಿ ಘೋಷಿಸಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.