ಜಿಲ್ಲೆ

ಮಹಿಳೆಯರ ಯಶಸ್ಸಿನ ಹಿಂದೆ ಪುರುಷರೂ ಇದ್ದಾರೆ

ಚಾಮರಾಜನಗರ: ಪ್ರಸ್ತುತ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ಮಹಿಳೆಯರ ಯಶಸ್ಸಿಗೆ ಪುರುಷರು ಸಹ ಕಾರಣರಾಗಿದ್ದಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಅವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಗ್ರಂಥಾಲಯ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಲವು ಮಂದಿ ಪುರುಷರ ಯಶಸ್ಸಿಗೆ ಮಹಿಳೆಯರು ಕಾರಣರಾಗಿದ್ದಾರೆ ಎಂಬುದು ಸಾಮಾನ್ಯ. ಮಹಿಳೆಯರು ಕೂಡ ಉನ್ನತ ಶಿಕ್ಷಣ ಪಡೆದು ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಮಹಿಳೆಯರ ಯಶಸ್ಸಿನ ಹಿಂದೆ ಸಾಕಷ್ಟು ಪುರುಷರ ಕಠಿಣ ಪರಿಶ್ರಮವಿದೆ. ಮಹಿಳೆಯರು ದಕ್ಷತೆ, ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುವ ಮೂಲಕ ಮಹಿಳಾ ದಿನಾಚರಣೆಗೆ ಸಾರ್ಥಕತೆ ತಂದಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಅಧಿಕಾರಿಗಳಿದ್ದು, ಒಂದು ತಂಡವಾಗಿ ಸೇವೆ ಸಲ್ಲಿಸಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಮಹಿಳೆಯರು ಉತ್ತಮ ಸಾಧನೆಗೆ ಸಾಕಷ್ಟು ಪರಿಶ್ರಮ ಹಾಕಬೇಕು. ಸಮಾಜಿಕವಾಗಿ, ಕೌಟುಂಬಿಕವಾಗಿ ಮಹಿಳೆ, ಪರುಷರಲ್ಲಿ ಯಾರು ಮೇಲೂ ಅಲ್ಲ. ಯಾರು ಕೀಳು ಅಲ್ಲ. ಇಬ್ಬರೂ ಸಮಾನರಾಗಿದ್ದಾರೆ. ಮಹಿಳೆ ಪುರುಷರಿಬ್ಬರು ಸೌಹಾರ್ದತೆ, ಹೊಂದಾಣಿಕೆ, ಸಾಮರಸ್ಯದಿಂದ ಮುನ್ನಡೆದಾಗ ಮಾತ್ರ ಇಬ್ಬರಿಗೂ ಯಶಸ್ಸು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ಮಹಿಳಾ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ವಕೀಲರ ಸಂಘದ ಆಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕೊಳ್ಳೇಗಾಲ ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಎನ್.ಆರ್.ಲೋಕಪ್ಪ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ, ಜೆ.ಎಂ.ಎಫ್.ಸಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಂಪಕಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎನ್.ನಿವೇದಿತಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷಸ್ವಾಮಿ, ಉಪಾಧ್ಯಕ್ಷ ಮಂಜು ಹರವೆ, ಜಂಟಿ ಕಾರ್ಯದರ್ಶಿ ಮಂಜು ಇತರರು ಉಪಸ್ಥಿತರಿದ್ದರು.