ಜಿಲ್ಲೆ

ಕೆ.ಶಿವರಾಂ ಕನಸು ನನಸಾಗಿಸಲು ಅಭಿಮಾನಿಗಳು ನೆರವಾಗಿ

ಚಾಮರಾಜನಗರ: ರಾಜಕೀಯ ಅಧಿಕಾರವನ್ನು ಪಡೆದುಕೊಂಡರೆ ನನ್ನ ಕನಸುಗಳನ್ನು ನೆರವೇರಿಸಿಬಹುದು ಎಂದು ಹೇಳಿದ್ದ ಕೆ.ಶಿವರಾಂ ಅವರ ಕನಸನ್ನು ನನಸು ಮಾಡಲು ಅಭಿಮಾನಿಗಳು ಬೆಂಬಲ ನೀಡಿ ಎಂದು ವಾಣಿ ಕೆ.ಶಿವರಾಂ ಮನವಿ ಮಾಡಿದರು.

ನಗರದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕೆ.ಶಿವರಾಂ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ತುಂಬಾ ಭಾರವಾದ ಹೃದಯದಿಂದ ಇಲ್ಲಿಗೆ ಬಂದಿದ್ದೇನೆ. ಕೆ.ಶಿವರಾಂ ಅವರ ಬಲದಿಂದ ಇಲ್ಲಿ ನಿಂತಿದ್ದೇನೆ. ನನಗೆ ಅವರು ಗುರುವಿನ ಸ್ಥಾನದಲ್ಲಿದ್ದರು. ಅವರು ಅಧಿಕಾರದಲ್ಲಿ ಇದ್ದಾಗ ನೂರಾರು ಸಮಸ್ಯೆಗಳನ್ನೂ ಹೊತ್ತುಕೊಂಡು ಜನರು ಬರುತ್ತಿದ್ದರು. ಆಧೃಏ ಅಧಿಕಾರಿಯಾಗಿದ್ದಾಗ ತುಂಬಾ ತೊಂದರೆಗಳನ್ನು ಅನುಭವಿಸಿದ್ದರು. ಯಾವುದಕ್ಕೂ ಎದೆಗುಂದದೆ ಸಾಗಿದರು. ತಮ್ಮ ಸಮುದಾಯದ ಜನರಿಗಾಗಿ ಬದುಕಿದರು ಎಂದರು.

ಪ್ರಸ್ತುತ ಯಾವ ಪಕ್ಷವೂ ಅವರನ್ನು ಗುರುತಿಸಲಿಲ್ಲ. ಸಿದ್ಧಾಂತಬಿಟ್ಟು ಅವರು ಬದುಕದ ಕಾರಣಕ್ಕೆ ಪ್ರತಿಸಲವೂ ಚುನಾವಣೆಗಳಲ್ಲಿ ಟಿಕೆಟ್ ತಪ್ಪುವಂತೆ ಮಾಡಿದರು. ಸಿಕ್ಕ ಅವಕಾಶಗಳನ್ನು ಬೇರೆಯವರಿಗಾಗಿಯೇ ಕಳೆದುಕೊಂಡು ಬಿಟ್ಟರು. ರಾಜಕೀಯದಲ್ಲಿ ಸಾಕಷ್ಟು ನಿರಾಸೆ ಅನುಭವಿಸಿದರು. ಅವರಿಗೆ ಬಹುದೊಡ್ಡ ಅನ್ಯಾಯವಾಗಿದೆ. ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಾನು ತೆಗೆದುಕೊಳ್ಳುವ ರಾಜಕೀಯ ತೀರ್ಮಾನಕ್ಕೆ ಅಭಿಮಾನಿಗಳು ಬೆಂಬಲ ನೀಡಿ ಅವರನ್ನು ಜೀವಂತವಾಗಿ ಉಳಿಸುವ ಕೆಲಸ ಮಾಡಬೇಕು ಎಂದರು.

ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಅಣಗಳ್ಳಿ ಬಸವರಾಜು ಮಾತನಾಡಿ, ನಮ್ಮ ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಕೆ.ಶಿವರಾಂ ಅವರು ಬಹುದೊಡ್ಡ ಕನಸು ಕಟ್ಟಿಕೊಂಡಿದ್ದರು. ಅವರು ನಮ್ಮ ಜಿಲ್ಲೆಯವರೇ ಆಗಿದ್ದರು ಎನ್ನುವುದೇ ಹೆಮ್ಮೆ ಅನಿಸುತ್ತದೆ. ಬಹಳ ಬಡತನದಲ್ಲಿ ಹುಟ್ಟಿ ಬಹುದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಅವರೇ ಸಾಕ್ಷಿಯಾಗಿದ್ದಾರೆ. ರಾಜ್ಯದಲ್ಲಿ ಪ್ರಪ್ರಥಮವಾಗಿ ಕನ್ನಡದಲ್ಲಿ ಐಎಎಸ್ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕೆ.ಶಿವರಾಂ ಅವರು ಅಧಿಕಾರಿಯಾಗಿದ್ದಾಗ ಮಾಡಿದ್ದ ಕೆಲಸಗಳನ್ನು ಇಂದಿನ ರಾಜಕಾರಣಿಗಳು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಕೆ.ದೀಪಕ್ ಮಾತನಾಡಿದರು. ಟಿ.ನರಸೀಪುರ ನಳಂದ ಬೌದ್ಧ ವಿಹಾರದ ಬೋಧಿ ರತ್ನ ಬಂತೇಜಿ, ಚಿತ್ರದುರ್ಗ ಛಲವಾದಿ ಮಠದ ಪೀಠಾಧ್ಯಕ್ಷ ಛಲವಾದಿ ಬಸವನಾಗಿಸ್ವಾಮಿ, ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ಕೆ.ಶಿವರಾಂ ಅಳಿಯ ಭರತ್, ಛಲವಾದಿ ಮಹಾಸಭಾ ಖಜಾಂಚಿ ಮೈಕೋ ನಾಗರಾಜ್, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ನಾಗು, ದಲಿತ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.