ಚಾಮರಾಜನಗರ: ಸುಮಾರು 10 ವರ್ಷಗಳಿಂದ ಕಲಾಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸುತ್ತಿರುವ ಯುಕರೊಬ್ಬರು, ತನ್ನೊಂದಿಗೆ ನೂರಾರು ನೃತ್ಯಪಟುಗಳನ್ನು ಹುಟ್ಟುಹಾಕಿ ಕಲಾಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡುವ ಕನಸು ಹೊತ್ತುಕೊಂಡಿದ್ದಾರೆ.
ನಗರದ ಅವತಾರ್ ಪ್ರವೀಣ್ ಎಂದೇ ಹೆಸರಾಗಿರುವ ಪ್ರವೀಣ್ ಅವರು 2009-10 ರಲ್ಲಿ ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ ನೃತ್ಯ ತರಬೇತಿ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ತಮ್ಮ ಕನಸನ್ನು ನನಸಾಗುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಈ ತರಬೇತಿ ಸಂಸ್ಥೆಯಲ್ಲಿ ಸಾವಿರಾರು ಮಕ್ಕಳು ಈ ವರೆಗೂ ತರಬೇತಿ ಪಡೆದು ನುರಿತ ನೃತ್ಯಪಟುಗಳಾಗಿದ್ದಾರೆ. ಇತ್ತೀಚೆಗೆ ಒಂದು ವರ್ಷಗಳ ಹಿಂದೆ ಗುಂಡ್ಲುಪೇಟೆ ಪಟ್ಟಣದಲ್ಲೂ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.
ಎರಡು ಸಂಸ್ಥೆಯನ್ನು ಒಳಗೊಂಡಂತೆ ಪ್ರಸ್ತುತ 160 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಪ್ರಸ್ತುತ ಕನ್ನಡ ಚಲನ ಚಿತ್ರಗಳಲ್ಲಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಅವತಾರ್ ಪ್ರವೀಣ್ ಅವರು, ಕನ್ನಡ, ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಗಳ ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಹಿನ್ನೆಲೆ ನೃತ್ಯಪಟು ಹಾಗೂ ಸಹ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ತರಬೇತಿ ಸಂಸ್ಥೆಯಲ್ಲಿ ಜಾನಪದ ಹಾಗೂ ಅನ್ಯ ದೇಶಿಯ ನೃತ್ಯ ಪ್ರಕಾರಗಳ ಮೂಲ ಮಾದರಿಯಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.
ಈವರೆಗೆ ಅವತಾರ್ ತಂಡದವರು 28 ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದಲ್ಲದೇ 14 ಬಾರಿ ದ್ವಿತೀಯ ಸ್ಥಾನ, 6 ಬಾರಿ ತೃತೀಯ ಸ್ಥಾನ ಗಳಿಸಿದ್ದಾರೆ. 2018 ರಲ್ಲಿ ಆಯೋಜಿಸಿದ್ದ 5ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ತಂಡದ ನೂರು ನೃತ್ಯ ಪಟುಗಳಿಂದ, ನೂರು ಕನ್ನಡ ಚಲನಚಿತ್ರ ಗೀತೆಗಳಿಗೆ ನೃತ್ಯ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನಪಡೆದುಕೊಂಡ ರಾಜ್ಯದ ಮೊಟ್ಟ ಮೊದಲ ನೃತ್ಯ ಶಾಲೆ ಎಂಬ ಹೆಗ್ಗಳಿಕೆಯನ್ನು ಈ ಸಂಸ್ಥೆ ಪಡೆದುಕೊಂಡಿದೆ. ಪ್ರಸ್ತುತ ಈ ಶಾಲೆಯಲ್ಲಿ ತರಬೇತಿ ಪಡೆದಿರುವ ಮಕ್ಕಳು ಮತ್ತು ಹಿರಿಯ ನೃತ್ಯ ಪಟುಗಳು ಕನ್ನಡ ಚಲನಚಿತ್ರಗಳಲ್ಲಿ ಹಾಗೂ ಹತ್ತಾರು ಡ್ಯಾನ್ಸ್ ರಿಯಾಲಿಟಿ ಶೋನ ಹಿನ್ನೆಲೆ ನೃತ್ಯಪಟುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನ:
ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ನೃತ್ಯ ಪಟುಗಳು ಚಾಮರಾಜನಗರ, ಮೈಸೂರು, ಬೆಂಗಳೂರು, ತುಮಕೂರು, ಮಂಡ್ಯ, ರಾಮನಗರ, ಕುಶಾಲನಗರ, ಕೊಡಗು ಅಲ್ಲದೇ ಹೈದರಾಬಾದ್, ಚೆನೈ, ಮುಂಬೈ ಹಾಗೂ ಇನ್ನಿತರೆ ಹೊರ ರಾಜ್ಯಗಳಲ್ಲಿ ನಡೆದ ಸಾವಿರಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ತರಬೇತಿ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಮತ್ತು ಬಡಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಅವರೆಲ್ಲರೂ ಪ್ರತಿಭಾವಂತರಾಗಿದ್ದರೂ ಅವರಿಗೆ ವಿವಿಧ ಕಡೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಣಕಾಸಿನ ತೊಂದರೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ಹಣಕಾಸಿನ ನೆರವನ್ನು ಸಂಸ್ಥೆಯಿಂದಲೇ ಭರಿಸಿ ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಾಮಾಣಿಕವಾಗಿ ಹೊರೆಹಚ್ಚುತ್ತಿದ್ದಾರೆ.
ಎರಡು ಕಡೆ ತರಬೇತಿ ಸಂಸ್ಥೆ:
ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಐಸಿಐಸಿಐ ಬ್ಯಾಂಕ್ ಕಟ್ಟಡದ ಮೂರನೇ ಮಹಡಿಯಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಮತ್ತೊಂದು ಸಂಸ್ಥೆ ಗುಂಡ್ಲುಪೇಟೆಯ ವೆಂಕಟೇಶ್ವರ ಚಿತ್ರಮಂದಿರದ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಇರುವ ಯಾರೇ ಆದರೂ ಸಂಸ್ಥೆಗೆ ದಾಖಲಾಗಬಹುದಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಪಾಲಕರು ಮಕ್ಕಳ ಸಾಧನೆಗೆ ಆರ್ಥಿಕ ನೆರವನ್ನು ನೀಡಿದರೆ, ಉಳಿದಂತೆ ಸಂಸ್ಥೆಯೂ ಕೂಡ ಅವರ ಬೆನ್ನಿಗೆ ನಿಲ್ಲುತ್ತದೆ. ಹಣ ಕಾಸಿನ ನೆರವು ಇಲ್ಲದ ಸಾಕಷ್ಟು ಮಕ್ಕಳು ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಸಾಧನೆ ಮಾಡಿದ್ದಾರೆ. 10 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ 2013ನೇ ಸಾಲಿನಿಂದ ಪ್ರತಿ ಭಾನುವಾರ ಉಚಿತ ತರಬೇತಿ ನೀಡಲಾಗುತ್ತಿದೆ. ಆ ತರಬೇತಿಗೆ ನಗರ ಅಲ್ಲದೇ ಗ್ರಾಮೀಣ ಪ್ರದೇಶಗಳಿಂದ 200 ಕ್ಕಿಂತಲೂ ಹೆಚ್ಚು ಮಕ್ಕಳು ಬಂದು ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಶೇ.90 ರಷ್ಟು ಹೆಣ್ಣು ಮಕ್ಕಳೇ ನೃತ್ಯ ತರಬೇತಿ ಪಡೆಯುತ್ತಿರುವುದು ವಿಶೇಷ. ನೃತ್ಯ ಎಂಬ ವಿಚಾರ ಬಂದಾಗ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ಕೆಲಸವನ್ನು ಅವತಾರ್ ಪ್ರವೀಣ್ ಮಾಡುತ್ತಿದ್ದಾರೆ.
ಮಕ್ಕಳಿಗಾಗಿ ಬೇಸಿಗೆ ಶಿಬಿರ:
ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ 10 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಏಪ್ರಿಲ್ ಮೊದಲನೇ ವಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ನೃತ್ಯ, ನಾಟಕ, ಸಂಗೀತ, ಚಿತ್ರಕಲೆ, ಫೋಟೋಗ್ರಫಿ, ವಿಡಿಯೋ ಎಡಿಟಿಂಗ್ ಹಾಗೂ ಇನ್ನಿತರೆ ಸೃಜನಶೀಲ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಶಿಬಿರದ ಸಮಾರೋಪ ಸಮಾರಂಭದಲ್ಲಿ ಬೃಹತ್ ವೇದಿಕೆಯಲ್ಲಿ ಮಕ್ಕಳ ಕಲೆಯನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಲಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 7353819994, 7483265608 ಅನ್ನು ಸಂಪರ್ಕಿಸುವಂತೆ ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ ಸಂಸ್ಥಾಪಕ ಅವತಾರ್ ಪ್ರವೀಣ್ ತಿಳಿಸಿದ್ದಾರೆ.
ಬಡವರು-ಶ್ರೀಮಂತರು ಎನ್ನುವ ಭೇದ ಭಾವವನ್ನು ಇಲ್ಲದೇ, ಕಲೆ ಎನ್ನುವ ವಿಚಾರದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದೇನೆ. ರಾಜ್ಯದಲ್ಲಿ ಬಹುದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಬಲ್ಲ ನೃತ್ಯ ಪಟುಗಳನ್ನು ನಮ್ಮ ಸಂಸ್ಥೆಯಿಂದ ಹುಟ್ಟು ಹಾಕುವ ಹಂಬಲವಿದೆ.-ಅವತಾರ್ ಪ್ರವೀಣ್, ನೃತ್ಯ ನಿರ್ದೇಶಕ ಮತ್ತು ಸಂಸ್ಥಾಪಕ, ಅವತಾರ್ ಡ್ಯಾನ್ಸ್ ಇನ್ಸ್ಟಿಟ್ಯೂಟ್ಚಾಮರಾಜನಗರ