ಹನೂರು: ಫಲಾನುಭವಿಗಳು ಸರ್ಕಾರದಿಂದ ಸಿಗುವ ಸಹಾಯ ಧನವನ್ನು ಪಡೆದುಕೊಂಡು ಆದಷ್ಟು ಬೇಗ ಮನೆ ನಿರ್ಮಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಎಲ್ಲೇಮಾಳ, ಕೌದಳ್ಳಿ, ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾತಿ ಆದೇಶ ಪ್ರತಿ ವಿತರಿಸಿ ಮಾತನಾಡಿದರು.
ಪ್ರತಿ ಕುಟುಂಬವೂ ಸ್ವಂತ ಸೂರನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿದೆ. ಆದ್ದರಿಂದ ಆಯ್ಕೆಯಾಗಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಈ ಯೋಜನೆಯಡಿ ಜಿಪಿಎಸ್ ಮೂಲಕ ಅಡಿಪಾಯ, ಗೋಡೆ, ಛಾವಣಿ ಹಾಗೂ ಮನೆ ಪೂರ್ಣಗೊಂಡ 4 ಹಂತಗಳಲ್ಲಿ ಸರ್ಕಾರದಿಂದ ಸಹಾಯ ಧನ ಸಿಗಲಿದೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಂಡು ಶೀಘ್ರ ಮನೆ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರಲ್ಲದೆ ನರೇಗಾ ಯೋಜನೆಯಡಿ ಅನುದಾನ ಪಡೆದು ಪ್ರತಿಯೊಬ್ಬರೂ ಶೌಚಗೃಹ ಹೊಂದಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷರಾದ ಕಮಲಮ್ಮ, ಲಕ್ಷ್ಮೀ, ಸುರೇಶ್, ರೇವತಿ, ತಾಪಂ ಇಒ ಉಮೇಶ್, ಪಿಡಿಒಗಳಾದ ರಂಗರಾಜು, ಆಕಾಶ್ ಇತರರು ಇದ್ದರು.