ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದ ಸಮೀಪದ ರಾಷ್ಟ್ರೀಯ ಹೆದ್ದಾರಿ(209) ಬದಿಯಿರುವ ಯುಜಿಡಿ ಮ್ಯಾನ್‌ಹೋಲ್ ಉಕ್ಕಿ ದುರ್ನಾತ ಬೀರುತ್ತಿದ್ದು ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆದ್ದಾರಿ ಹೊಂದಿಕೊಂಡಂತೆ ಬಸ್ ನಿಲ್ದಾಣ, ಹೋಟೆಲ್‌ಗಳು, ಬೇಕರಿ, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿರುವುದರಿಂದ ಜನ ಸಾಮಾನ್ಯರ ಓಡಾಟ ಹೆಚ್ಚಾಗಿದೆ. ಆದರೆ, ಇದೇ ರಸ್ತೆಯಲ್ಲಿರುವ ಮ್ಯಾನ್‌ಹೋಲ್ ಉಕ್ಕಿ ಹರಿಯುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಕಳೆದ 10 ದಿನಗಳಿಂದ ಇದೇ ಪರಿಸ್ಥಿತಿ ಇದ್ದರೂ ಯಾವೊಬ್ಬ ಅಧಿಕಾರಿಯೂ ದುರಸ್ತಿಗೊಳಿಸುವತ್ತ ಗಮನಹರಿಸಿಲ್ಲ. ಮ್ಯಾನ್‌ಹೋಲ್ ನೀರು ಪಾದಚಾರಿ ಮಾರ್ಗದಲ್ಲಿ ನಿಂತಿದೆ. ಇದರಿಂದ ಜನರ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಇದರನ್ನು ಸರಿಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.