ಚಾಮರಾಜನಗರ : ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ನಿಧನರಾಗಿ ವರ್ಷವಾಗಿದ್ದು, ನಗರದಾದ್ಯಂತ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ನೆಚ್ಚಿನ ನಾಯಕನ ಸ್ಮರಣೆ ಮಾಡಿದರು.
ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ತೆರಳಿದ ನೂರಾರು ಅಭಿಮಾನಿಗಳು ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದರು. ಅಲ್ಲದೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿ ಧ್ರುವ ಅವರ ಸಾಧನೆಯನ್ನು ಸ್ಮರಿಸಿದರು. ಎನ್‌ಎಸ್‌ಯುಐ ಜಿಲ್ಲಾ ಘಟಕದ ವತಿಯಿಂದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸ್ಮರಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಲ್ಲದೆ, ಸಂಜೆ ವೇಳೆಯಲ್ಲಿ ಮೋಂಬತ್ತಿ ಮೆರವಣಿಗೆ ನಡೆಸುವ ಮೂಲಕ ಅಭಿಮಾನಿಗಳು ನಮನ ಸಲ್ಲಿಸಿದರು.
ರಾಮಸಮುದ್ರ, ಕಾಗಲವಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲೂ ಧ್ರುವ ಅವರ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧೆಡೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ನಗರದ ವಿವಿಧ ವಾರ್ಡ್‌ಗಳಲ್ಲೂ ಹಲವಾರು ನಗರಸಭಾ ಸದಸ್ಯರ ನೇತೃತ್ವದಲ್ಲಿ ಸ್ಮರಣೆ ಕಾರ್ಯಕ್ರಮ ಆಯೋಜಿಸಿ ನೆಚ್ಚಿನ ರಾಜಕೀಯ ನಾಯಕನಿಗೆ ನುಡಿ ನಮನ ಸಲ್ಲಿಸಲಾಯಿತು. ಈ ವೇಳೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಧ್ರುವನಾರಾಯಣ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜಿಲ್ಲೆಗೆ ಅಪಾರ ಕೊಡುಗೆ:
ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾಜಿ ಸಂಸದ ಆರ್.ಧ್ರುವನಾರಾಯಣ ಬಹಳಷ್ಟು ಪರಿಶ್ರಮ ವಹಿಸಿದ್ದು, ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಬಣ್ಣಿಸಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕಾರಣಿ ಯಾವ ರೀತಿ ಇರಬೇಕು. ಜನರೊಂದಿಗೆ ಬೆರೆಯುವುದು, ಸೌಜನ್ಯದಿಂದ ವರ್ತಿಸುತ್ತಿದ್ದ ರೀತಿ ಸೇರಿದಂತೆ ಚುನಾವಣೆಗಳನ್ನು ಎದುರಿಸುವುದು ಹೇಗೆ ಎಂಬ ಕುರಿತು ಅವರಿಂದ ಬಹಳಷ್ಟು ಕಲಿತಿದ್ದೇವೆ ಎಂದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಮಹಮದ್ ಅಸ್ಗರ್, ಕಾಗಲವಾಡಿ ಚಂದ್ರು, ಸೈಯದ್ ರಫಿ, ಆಲೂರು ಪ್ರದೀಪ್, ಮೋಹನ್ ನಗು, ನಾಗೇಂದ್ರ ನಾಯಕ, ಅಕ್ಷಯ್ ಇತರರು ಇದ್ದರು.
ರಾಮಸಮುದ್ರದಲ್ಲಿ ಧ್ರುವ ಸ್ಮರಣೆ:
ಮಾಜಿ ಸಂಸದ ಧ್ರುವನಾರಾಯಣ ಅಭಿಮಾನಿಗಳ ಬಳಗ ಹಾಗೂ ಚೇತನ ಕಲಾವಾಹಿನಿ ಸಂಸ್ಥೆ ವತಿಯಿಂದ ರಾಮಸಮುದ್ರದಲ್ಲಿ ಧ್ರುವ ಸ್ಮರಣೆ ಮಾಡಲಾಯಿತು. ಶಾಸಕ ಸಿ.ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಯಜಮಾನರಾದ ನಾಗರಾಜು, ಪಾಪಯ್ಯ, ಆಂಜನೇಯ, ಶಿವರಾಜು, ಬಸವರಾಜು, ಚೇತನ ಕಲಾವಾಹಿನಿ ಅಧ್ಯಕ್ಷ ಜಿ. ರಾಜಪ್ಪ, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಮುಖಂಡರಾದ ಚನ್ನಂಜಯ್ಯ, ಎನ್‌ಎಸ್‌ಯುಐನ ಜಿಲ್ಲಾಧ್ಯಕ್ಷ ಮೋಹನ್ ನಗು, ಸ್ವಾಮಿ, ಅಕ್ಷಯ್, ಕಾರಯ್ಯ, ನಾಗಶ್ರೀ ಇತರರು ಉಪಸ್ಥಿತರಿದ್ದರು.
ಪಕ್ಷ ಸಂಘಟನೆಗೆ ಎತ್ತಿದಕೈ:
ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಧ್ರುವನಾರಾಯಣ ಅವರು ಪಕ್ಷ ಸಂಘಟನೆಗೆ ಎತ್ತಿದಕೈ ಎಂದು ಜಿ.ಪಂ.ಮಾಜಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ ಹೇಳಿದರು. ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಗಲವಾಡಿ ಗ್ರಾಮದ ಬಗ್ಗೆ ವಿಶೇಷ ಕಾಳಜಿ ವಹಿಸಿ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆ ಮಾಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು. ಕಾಗಲವಾಡಿ ಚಂದ್ರು, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮರಿಸ್ವಾಮಿ, ಪಿಎಲ್ಡಿ ಬ್ಯಾಂಕ್ ಬಾಬು, ಮಹದೇವಸ್ವಾಮಿ, ಗ್ರಾ.ಪಂ.ಸದಸ್ಯ ಫಾಜಿಲ್ ಪಾಷ, ಜಿಲ್ಲಾ ಯುವ ಕಾಂಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಸುರೇಶ್, ಜಯಶಂಕರಮೂರ್ತಿ, ಗುಂಡಣ್ಣ, ಮಹದೇವಸ್ವಾಮಿ, ರವಿ ಬಂಗಾರು, ಲಿಂಗರಾಜು ಇತರರು ಇದ್ದರು.