ಜಿಲ್ಲೆ

ಶಿಕ್ಷಣ ಹೆಣ್ಣು ಮಕ್ಕಳಿಗೆ ಸ್ವಾಭಿಮಾನ ಕಲಿಸುತ್ತದೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಮಹಿಳೆಯರು ಹೆಚ್ಚಿನ ಶಿಕ್ಷಣವನ್ನು ಪಡೆಯುವ ಮೂಲಕ ಸ್ವಾಭಿಮಾನಿಗಳಾಗುತ್ತಾರೆ ಎಂದು ಲೇಖಕಿ ಶೀಲಾ ಸತ್ಯೇಂದ್ರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಥದ ಬೀದಿಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ರಂಗತರಂಗ ಟ್ರಸ್ಟ್ ಮತ್ತು ಜನ ಹಿತಾಶಕ್ತಿ ಹೋರಾಟ ವೇದಿಕೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಸಂಸ್ಥೆ 1975 ರಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಅದರಂತೆ ಪ್ರತಿವರ್ಷ ಮಾ.8 ರಂದು ಮಹಿಳೆಯರನ್ನು ಗೌರವಿಸುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಹೆಣ್ಣು ಕುಟುಂಬದ ಕಣ್ಣು ಇದ್ದಂತೆ. ಹೆಣ್ಣು ಎಲ್ಲಿ ಗೌರವಿಸಲ್ಪಡುತ್ತಾಳೆ ಆ ಸಮಾಜ, ದೇಶ ಸುಭಿಕ್ಷೆಯಾಗಿರುತ್ತದೆ. ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತದೆ ಅದರ ಮೇಲೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಫುಲೆ, ಕಿತ್ತೂರು ರಾಣೀ ಚೆನ್ನಮ್ಮ, ಅಬ್ಬಕ್ಕ, ಇಂದಿರಾಗಾಂಧಿ ಹಾಗೂ ಇನ್ನೂ ಮುಂತಾದ ಮಹಿಳೆಯರ ಸಾಧನೆಯನ್ನು ನಾವೆಲ್ಲರೂ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲೂ ಹಲವಾರು ಮಹಿಳಾ ಅಧಿಕಾರಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದು, ದಕ್ಷ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಇರುವಿಕೆಯನ್ನು ತೋರಿದ್ದಾಳೆ. ಪುರುಷ ಸಮಾಜದಿಂದ ನಡೆಯುತ್ತಿರುವ ಮಹಿಳೆಯರ ಮೇಲಿನ ತಾರತಮ್ಯ ಕಡಿಮೆ ಆಗಬೇಕು. ಮಹಿಳೆಯರ ಕೆಲಸವನ್ನು ಗುರುತಿಸಿ ಅವಕಾಶ ಮಾಡಿದರೆ ಏನು ಬೇಕಾದರೂ ಸಾಧನೆ ಮಾಡುತ್ತಾಳೆ ಎಂದರು.

ಹಿರಿಯ ವಕೀಲೆ ನಾಗಲಕ್ಷ್ಮೀ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಮಹಿಳೆಯರು ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳುವುದೇ ಮಹಿಳಾ ದಿನಾಚರಣೆ ಉದ್ದೇಶವಾಗಿದೆ. ಮಹಿಳೆಯರು ಶಿಕ್ಷಣದ ಜತೆಗೆ ತಮ್ಮ ಸಂವಿಧಾನದ ಹಕ್ಕು ಬಾಧ್ಯತೆಗಳನ್ನು ಪಡೆದುಕೊಳ್ಳಬೇಕು. ಮಹಿಳೆಯರ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸಬೇಕು. ಮಹಿಳೆಯರ ಶೋಷಣೆಗೆ ಪುರುಷರು ಮಾತ್ರ ಕಾರಣರಲ್ಲ, ಇದರಲ್ಲಿ ಮಹಿಳೆಯರು ಪಾಲು ಇದೆ ಎಂಬುದನ್ನು ಅರಿತುಕೊಂಡು ಸಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಮಹಿಳಾ ಸಂಚಾಲಕಿ ಪಾರ್ವತಮ್ಮ ಮತ್ತು ಜಾನಪದ ಎ ಗ್ರೇಡ್ ಕಲಾವಿದೆ ತುಳಸಮ್ಮ ಅವರನ್ನು ಸನ್ಮಾನಿಸಲಾಯಿತು. ರಂಗತರಂಗ ಟ್ರಸ್ಟ್ ಅಧ್ಯಕ್ಷ ಮತ್ತು ಹಿರಿಯ ಸಾಹಿತಿ ಸೋಮಶೇಖರ್ ಬಿಸಲ್ವಾಡಿ, ಜನ ಹಿತಾಸಕ್ತಿ ಹೋರಾಟ ಸಮಿತಿ ಅಧ್ಯಕ್ಷ ರಾಮಸಮುದ್ರ ಸುರೇಶ್, ಶಿಕ್ಷಕಿ ಧನಲಕ್ಷ್ಮೀ ಹಾಗೂ ಇತರರು ಉಪಸ್ಥಿತರಿದ್ದರು.