ಜಿಲ್ಲೆ

ಪುಂಡಾನೆ ಸೆರೆ ಹಿಡಿಯಲು ಸಚಿವ ಖಂಡ್ರೆ ಸೂಚನೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಹಾವಳಿ ಇಡುತ್ತಿರುವ ಪುಂಡಾನೆಯನ್ನು ಸೋಮವಾರದಿಂದಲೇ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿ, ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು.

ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಸ್ವಾಗತ ಕೇಂದ್ರದ ಆವರಣದಲ್ಲಿ ರೈತರು ಸಚಿವರಿಗೆ ಮನವಿ ಪತ್ರ ನೀಡಿದರು. ಪುಂಡಾನೆ ಕಾಟದಿಂದ ಬೆಳೆಗಳು ಹಾನಿಯಾಗಿವೆ. ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಆನೆ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಮನವಿ ಸಲ್ಲಿಸಿದರೂ ಈವರೆಗೂ ಆನೆ ಸೆರೆ ಹಿಡಿದಿಲ್ಲ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರ ಖಂಡ್ರೆ, ಈ ಭಾಗದಲ್ಲಿ ಕಾಟ ಕೊಡುತ್ತಿದ್ದ ಒಂದು ಆನೆಯನ್ನು ಸೆರೆ ಹಿಡಿದಿದ್ದಾರಂತೆ. ನನಗೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೆಲವೆಡೆ ರೈಲು ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲೆಲ್ಲ ಆನೆ ಕಾಟ ನಿಯಂತ್ರಣಗೊಂಡಿದೆ. ರೈಲು ಬ್ಯಾರಿಕೇಡ್ ಅಳವಡಿಕೆಯಾಗದ ಕಡೆಗಳಲ್ಲಿ ಆನೆಗಳು ಬರುತ್ತಿವೆ. ಪುಂಡಾನೆಯನ್ನು ಸೆರೆ ಹಿಡಿದು ಕಾಡಿಗಾದರೂ ಬಿಡಿ ಅಥವಾ ಪುನರ್ವಸತಿ ಕೇಂದ್ರಕ್ಕಾದರೂ ಬಿಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಇದ್ದರು. ರೈತರಾದ ಎಚ್.ಆರ್.ಬಸವಣ್ಣ, ಮಹದೇವಪ್ಪ, ಪ್ರಕಾಶ್, ಶಿವಕುಮಾರ್, ಕುಮಾರ್, ಸಿದ್ದರಾಮು, ಮಹೇಶ್, ಮಲ್ಲಿಕಾರ್ಜುನ, ಮಲ್ಲಣ್ಣ, ಮಂಜು, ಬಾಲು, ಮಾದೇಶ ಮತ್ತು 30ಕ್ಕೂ ಹೆಚ್ಚು ರೈತರು ಇದ್ದರು.