ಜಿಲ್ಲೆ

2ನೇ ಅವಧಿಯಲ್ಲಿ 2ನೇ ಭೇಟಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ ಎರಡನೇ ಸಲ ಭೇಟಿ ನೀಡುತ್ತಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಾ.12ರಂದು ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಸಿಎಂ ಸಿದ್ದು ಭಾಗವಹಿಸುವ ಮೂಲಕ ಎರಡನೇ ಅವಧಿಯಲ್ಲಿ ಎರಡನೇ ಭೇಟಿ ನೀಡುತ್ತಿದ್ದಾರೆ.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕಳೆದ ವರ್ಷ ಸೆ.26 ಮತ್ತು 27ರಂದು ಜಿಲ್ಲಾ ಪ್ರವಾಸ ಕೈಗೊಂಡು ಚಾಮರಾಜನಗರಕ್ಕೆ ಆಗಮಿಸಿದ್ದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿ, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಚಾಮರಾಜನಗರಕ್ಕೆ ಬರುವುದಕ್ಕೂ ಮುನ್ನ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಸಿಎಂ ಸಿದ್ದು ಮಾತನಾಡಿ ‘ಚಾಮರಾಜನಗರಕ್ಕೆ ಹೋದರೆ ಸಿಎಂ ಕುರ್ಚಿ ಹೋಗುತ್ತದೆ ಎನ್ನುವ ಮೌಢ್ಯವನ್ನು ವಿದ್ಯಾವಂತರೇ ಹೆಚ್ಚು ನಂಬುತ್ತಾರೆ. ನಾನು 12 ಬಾರಿ ಚಾಮರಾಜನಗರಕ್ಕೆ ಹೋಗಿ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ’ ಎಂದಿದ್ದರು.

ಚಾಮರಾಜನಗರಕ್ಕೆ ಬಂದವರು ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೌಢ್ಯಕ್ಕೆ ಸಿದ್ದರಾಮಯ್ಯ ಸೆಡ್ಡು ಹೊಡೆಯುತ್ತಲೇ ಇದ್ದಾರೆ.
ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್ ಚಾ.ನಗರಕ್ಕೆ ಬಂದು ಹೋದ ಮೇಲೆ ಕಾಕತಾಳೀಯವೆಂಬಂತೆ ಅಧಿಕಾರ ಕಳೆದುಕೊಂಡರು. ಇದು ಕಳಂಕವಾಗಿ ಮಾರ್ಪಟ್ಟಿತು. ಈ ಮೌಢ್ಯದಿಂದಾಗಿ 1991ರಲ್ಲಿ ವೀರೇಂದ್ರ ಪಾಟೀಲ್ ಭೇಟಿ ನೀಡಿದ್ದೇ ಕೊನೆಯಾಗಿತ್ತು. ನಂತರ ಸಿಎಂ ಆದ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರಂಸಿಂಗ್, ಬಿ.ಎಸ್.ಯಡಿಯೂರಪ್ಪ, ಸದಾನಂದಗೌಡ ತಮ್ಮ ಅಧಿಕಾರಾವಧಿಯಲ್ಲಿ ನಗರಕ್ಕೆ ಬಂದಿರಲಿಲ್ಲ. ಬಳಿಕ 2007ರ ಮೇ 28ರಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಭೇಟಿ ಕೊಟ್ಟರು.
ಇವರ ನಂತರ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅಧಿಕಾರಾವಧಿಯ ಕೊನೆಯ ವರ್ಷಗಳಲ್ಲಿ ಬಂದರು. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅಧಿಕಾರದ ಪ್ರಾರಂಭದಲ್ಲೇ ಚಾ.ನಗರಕ್ಕೆ ಭೇಟಿ ಕೊಟ್ಟರು. ನಂತರದ ದಿನಗಳಲ್ಲಿ ಹಲವು ಬಾರಿ ಆಗಮಿಸಿ ದಾಖಲೆ ಬರೆದರು.
1997ರ ಆಗಸ್ಟ್ 15ರಂದು ಚಾಮರಾಜನಗರ ಹೊಸ ಜಿಲ್ಲೆಯಾಗಿ ರಚನೆಯಾಯಿತು. ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಮೂಢನಂಬಿಕೆಗೆ ಕಟ್ಟುಬಿದ್ದು ಚಾಮರಾಜನಗರಕ್ಕೆ ಬಾರದೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಜಿಲ್ಲೆ ಉದ್ಘಾಟಿಸಿದ್ದರು. ಆದರೆ ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಬಂದು ಉದ್ಘಾಟನೆ ಮಾಡಿದ್ದರು.

ಗರಿಗೆದರಿದ ನಿರೀಕ್ಷೆಗಳು:
ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡುತ್ತಿರುವುದು ಅಭಿವೃದ್ಧಿಯ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸಿಎಂ ಸಿದ್ದು ಬಜೆಟ್ ಮಂಡನೆಯಲ್ಲಿ ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ, 2025-26ನೇ ಸಾಲಿನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆ, ಜಿಲ್ಲಾಸ್ಪತ್ರೆಯಲ್ಲಿ ಅವಶ್ಯಕತೆ ಇರುವ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ, ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ/ತಾರಾಲಯ ಕಾರ್ಯಾರಂಭ ಮಾಡುವುದು, ಪರಿಸರ ಪ್ರವಾಸೋದ್ಯಮ ಉತ್ತೇಜಿಸಲು ಬಂಡೀಪುರ ಇಂಟರ್‌ಪ್ರಿಟೇಷನ್ ಸೆಂಟರ್‌ಗಳನ್ನು ಜೆ.ಎಲ್.ಆರ್. ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುವುದು, ಬಂಡೀಪುರದಲ್ಲಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ಕಾರ್ಯ ಪಡೆ ರಚನೆ ಮತ್ತು ಹೆಚ್ಚುವರಿ ಮಾನವ ಸಂಪನ್ಮೂಲ, ಆತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ೋಷಣೆ ಮಾಡಿದ್ದರು. ಅದಾಗ್ಯೂ ಜಿಲ್ಲೆಯ ಜನರಿಗೆ ಬಜೆಟ್ ತೃಪ್ತಿಕೊಟ್ಟಿರಲಿಲ್ಲ. ಹೀಗಾಗಿ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಜಿಲ್ಲೆಯ ಪ್ರಗತಿಗಾಗಿ ಅನುದಾನ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಆರ್.ಧ್ರುವನಾರಾಯಣ್ ಸ್ಮರಣೆಗಾಗಿಯಾದರೂ ಜಿಲ್ಲೆಗೆ ಕೊಡುಗೆ ೋಷಣೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

‘ಲೋಕ’ ಮೇಲೆ ಪ್ರಭಾವ
ಚಾಮರಾಜನಗರದಲ್ಲಿ ಮಾ.12ರಂದು ಹಮ್ಮಿಕೊಂಡಿರುವ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶವು ಮುಂದಿನ ಲೋಕಸಭೆ ಚುನಾವಣೆ ಮೇಲೆ ಸಕಾರಾತ್ಮಕ ಪ್ರಭಾವವನ್ನು ಉಂಟು ಮಾಡಲಿದೆ. ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿ ಮತದಾರರು ಕಾಂಗ್ರೆಸ್ ‘ಕೈ’ ಹಿಡಿದಿದ್ದಾರೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳು ಜನಪ್ರಿಯವಾಗಿವೆ. ಬಡವರು ಮತ್ತು ಮಧ್ಯಮ ವರ್ಗದ ವಲಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಗೌರವವಿದೆ. ಈ ಜನಪ್ರಿಯತೆಯನ್ನು ಲೋಕಸಭೆ ಚುನಾವಣೆಗೆ ಬಳಸಿಕೊಳ್ಳಬಹುದು.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾ.12ರಂದು ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸುಮಾರು 30 ಸಾವಿರ ಲಾನುಭವಿಗಳ ಭಾಗವಹಿಸುವ ನಿರೀಕ್ಷೆ ಇದೆ.ಸಿ.ಪುಟ್ಟರಂಗಶೆಟ್ಟಿ, ಶಾಸಕ ಮತ್ತು ಎಂಎಸ್‌ಐಎಲ್ ಅಧ್ಯಕ್ಷ, ಚಾಮರಾಜನಗರ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿರುವ ಗ್ಯಾರಂಟಿ ಯೋಜನೆಗಳ ಲಾನುಭವಿಗಳ ಸಮಾವೇಶದ ಕುರಿತು ಶನಿವಾರ ಪಕ್ಷದ ಕಚೇರಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಸಿದ್ಧತೆಯ ಕುರಿತು ಚರ್ಚೆಗಳು ನಡೆಯಲಿವೆ.ಎಸ್‌ಪಿಕೆ ಉಮೇಶ್, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯ, ಚಾಮರಾಜನಗರ