ಚಾಮರಾಜನಗರ: ಜಿಲ್ಲೆಯ ಶಿವನ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ವಿಶೇಷ ಪೂಜೆ ಕೈಂಕರ್ಯಗಳು, ಭಕ್ತಾಧಿಗಳಿಂದ ಜಾಗರಣೆ, ದೇವಸ್ಥಾನಗಳಿಗೆ ಹರಿದುಬಂದ ಭಕ್ತ ಸಾಗರದ ನಡುವೆ ಶಿವರಾತ್ರಿ ಹಬ್ಬ ಸಂಭ್ರಮದಿಂದ ನಡೆಯಿತು.
ಮಹಾಶಿವರಾತ್ರಿಯ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವ ಸ್ವಾಮಿ ದೇವಾಲಯ, ನಗರದ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಸ್ಥಾನ, ಶ್ರೀಕಂಠೇಶ್ವರದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಯಡಬೆಟ್ಟ ಮಹದೇಶ್ವರ, ಹರದನಹಳ್ಳಿಯ ದಿವ್ಯಲಿಂಗೇಶ್ವರ ದೇವಸ್ಥಾನ, ಕೂಡ್ಲೂರಿನ ಶ್ರೀಮಂಟೇಸ್ವಾಮಿ ದೇವಸ್ಥಾನ, ಮಹದೇಶ್ವರ ದೇವಸ್ಥಾನ, ಗಡಿಭಾಗದ ಕೊಂಗಳ್ಳಿ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ ಸೇರಿದಂತೆ ಇನ್ನೂ ಹಲವಾರು ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು.
ಮಹಾಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳನ್ನು ವಿಶೇಷವಾಗಿ ಸಿಂಗಾರಗೊಳಿಸಲಾಗಿತ್ತು. ಮುಂಜಾನೆಯಿಂದಲೇ ಶಿವನಿಗೆ ವಿಶೇಷ ಅಭಿಷೇಕ ನೆರವೇರಿತು, ಬಳಿಕ ರುದ್ರಾಭಿಷೇಕ, ಹೋಮ ಹವನ ನಡೆದವು. ಶಿವಲಿಂಗಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗಿನಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಭಕ್ತರು ಶಿವನಿಗೆ ನಾಮಮಂತ್ರ ಸಹಿತ ಬಿಲ್ವಪತ್ರೆಗಳನ್ನು ಅರ್ಪಿಸಿದರು. ಮೂಲಮಂತ್ರ ಜಪಿಸಿ ದೇವರನ್ನು ಸಂಕಷ್ಟ ಪರಿಹರಿಸುವಂತೆ ಪ್ರಾರ್ಥಿಸಿದರು. ಎಲ್ಲಾ ದೇವಾಲಯಗಳಲ್ಲೂ ಹೆಚ್ಚಿನ ಜನಸಂದಣಿ ಕಂಡುಬಂದಿತು. ಹಲವು ದೇವಸ್ಥಾನಗಳಲಿ ್ಲಶಿವಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಜಾಗರಣೆ ಮಾಡಿದರು.
ಶ್ರೀಚಾಮರಾಜೇಶ್ವರನಿಗೆ ವಿಶೇಷ ಪೂಜೆ:
ನಗರದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಶ್ರೀಚಾಮರಾಜೇಶ್ವರಸ್ವಾಮಿಯನ್ನು ವಿವಿಧ ಹೂವುಗಳಿಂದ ಅಲಂಕಾರಮಾಡಲಾಗಿತ್ತು. ಸಾವಿರಾರು ಭಕ್ತರು ಹಾಗೂ ಸಾರ್ವಜನಿಕರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸರತಿಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಶಿವರಾತ್ರಿಯ ಅಂಗವಾಗಿ ಅನೇಕ ಭಕ್ತರು ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ಮಾಡಿದರು. ಕೊಳ್ಳೇಗಾಲ ತಾಲೂಕು ತಹಸೀಲ್ದಾರ್ ಮಂಜುಳಾ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯದ ಆವರಣದಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿತು.
ಜ್ಯೋತಿರ್ಲಿಂಗಗಳ ದರ್ಶನ:
ಮಹಾಶಿವರಾತ್ರಿಯ ಅಂಗವಾಗಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರಜಾಪಿತ ಬ್ರಹ್ಮಕುಮಾರ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿವಲಿಂಗಗಳನ್ನು ವೀಕ್ಷಣೆ ಮಾಡಿದರು. ಸೋಮನಾಥ, ಮಲ್ಲಿಕಾರ್ಜುನ, ಮಹಾಕಾಳೇಶ್ವರ, ವೈದ್ಯನಾಥ, ರಾಮೇಶ್ವರಂ, ತ್ರ್ಯಂಬಕೇಶ್ವರ, ಓಂಕಾರೇಶ್ವರ, ಭಿಮಾಶಂಕರ, ನಾಗೇಶ್ವರ, ವಿಶ್ವನಾಥ, ಗ್ರಿಶನೇಶ್ವರ, ಕೇದಾರನಾಥ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಪಡೆಯುವ ಮೂಲಕ ಈ ಬಾರಿಯ ಶಿವರಾತ್ರಿ ಆಚರಣೆಯನ್ನು ಸಾರ್ವಜನಿಕರು ವಿಭಿನ್ನವಾಗಿ ಆಚರಣೆ ಮಾಡಿದರು.
ವಸಬೆಲ್ಲ ಹಂಚಿಕೆ:
ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಹಲವರು ತಮ್ಮ ಸಹೋದರಿಯರಿಗೆ ವಸಬೆಲ್ಲ ಹಂಚುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದರು. ಈ ಪದ್ಧತಿ ಲಿಂಗಾಯತ ಸಮುದಾಯದಲ್ಲಿ ಹೆಚ್ಚಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಇದು ಅಣ್ಣ-ತಂಗಿಯ ಬಾಂಧವ್ಯದ ಸಂಕೇತವೂ ಆಗಿದೆ. ತವರು ಮನೆಯಿಂದ ಜನರು ಬೆಲ್ಲ, ವಸ, ಪೂಜಾ ಸಾಮಗ್ರಿ, ಅರಿಶಿನ-ಕುಂಕುಮ, ಧನ, ಧಾನ್ಯ, ಒಡವೆಗಳನ್ನು ನೀಡಿ ಶುಭಕೋರಿದರು. ಸುಮಂಗಲಿಯರು ಶಿವನನ್ನು ವಿಶೇಷವಾಗಿ ಪೂಜಿಸುವ ಮೂಲಕ ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.