ಜಿಲ್ಲೆ

ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಯುವಜನತೆ ಮಾದಕ ವಸ್ತುಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸಲಹೆ ನೀಡಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ದುಶ್ಚಟಗಳು ಸಾಮಾಜಿಕ ಶಾಂತಿ ಕದಡಲು ಪ್ರೇರಣೆ ನೀಡುತ್ತದೆ. ಮದ್ಯವ್ಯಸನಕ್ಕೆ ಒಳಗಾದರೆ ಆದ್ದರಿಂದ ಹೊರ ಬರುವುದು ಕಷ್ಟಕರ. ಬಹುತೇಕ ಸಂದರ್ಭದಲ್ಲಿ ಸಂಕಷ್ಟಗಳಿಗೆ ಸಿಲುಕಿದಾಗ ಪರಿಹಾರವಾಗಿ ದೇವಸ್ಥಾನ, ಚರ್ಚ್‌ಗಳಿಗೆ ಹೋಗಿ ಪ್ರಾರ್ಥಿಸುವುದು ಹಾಗೂ ಇನ್ನಿತರ ದಾರಿಗಳನ್ನು ಹುಡುಕುತ್ತಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ಮದ್ಯ ಸೇರಿದಂತೆ ಇತರ ಮಾದಕ ವಸ್ತುಗಳನ್ನು ಅರಸಿ ಹೋಗುವ ಮೂಲಕ ಒತ್ತಡದಿಂದ ಹೊರ ಬರುತ್ತೇವೆ ಎಂಬ ಮನೋಭಾವ ಹೊಂದಿರುತ್ತಾರೆ ಎಂದರು.

ವಿಶ್ವದಲ್ಲಿ ಪ್ರತಿಶತ ಐವರು ಮದ್ಯವ್ಯಸನದಲ್ಲಿ ತೊಡಗಿದ್ದಾರೆ. ನಮ್ಮ ದೇಶದಲ್ಲಿ ಇಬ್ಬರು ಮದ್ಯವ್ಯಸನದಲ್ಲಿ ತೊಡಗಿರುವುದು ವರದಿಗಳಿಂದ ತಿಳಿದು ಬಂದಿದೆ. ಮದ್ಯವ್ಯಸನದಿಂದ ಹೊರಬಾರದಿದ್ದರೆ ಕಷ್ಟವಾಗುತ್ತದೆ. ಈ ಹಿಂದೆ 20ನೇ ವಯಸ್ಸಿನವರು ಮಾದಕ ವ್ಯಸನಕ್ಕೆ ತುತ್ತಾಗುತ್ತಿದ್ದರು. ಆದರೆ, ಇತ್ತೀಚೆಗೆ 16-17 ವರ್ಷದವರೇ ತುತ್ತಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಮಾದಕ ವ್ಯಸನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯ. ಪಾಲಕರು ತಮ್ಮ ಮಕ್ಕಳ ಬಗ್ಗೆ ಗಮನಹರಿಸಬೇಕು. ಒತ್ತಡ, ಕಷ್ಟಕಾರ್ಪಣ್ಯ ಏನೇ ಇದ್ದರೂ ಮಾದಕ ವ್ಯಸನಕ್ಕೆ ಒಳಗಾಗದೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾತನಾಡಿ, ದುಶ್ಚಟಗಳಿಗೆ ಒಳಗಾದರೆ ತೊಂದರೆ ಅನುಭವಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಕೌಟುಂಬಿಕ ಪ್ರಕರಣಗಳು ಜಾಸ್ತಿ ಬರುತ್ತಿದ್ದು, ಇದರಲ್ಲಿ ಮದ್ಯವ್ಯಸನ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಭಾಗಿ ಮುಖ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಶ್ವೇಶ್ವರಯ್ಯ, ಮಾನಸಿಕ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರಾಜು, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಕುದರತ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪುಟ್ಟರಾಜು, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್, ಡಾ.ಉಮಾರಾಣಿ, ಗೋಪಾಲ ಭಾಗವಹಿಸಿದ್ದರು.