ಜಿಲ್ಲೆ

ಸರ್ಕಾರಿ ಆಸ್ಪತ್ರೆಗಳಿಗೆ ಬೇಕಿದೆ ಚಿಕಿತ್ಸೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಗುಡುವಿನ ಪ್ರಕಾರ ಮುಂದಿನ ಮೂರು ತಿಂಗಳೊಳಗಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಗುಣಮುಖವಾಗಲಿವೆಯೇ?

ಇಂತಹದೊಂದು ಪ್ರಶ್ನೆ ಜಿಲ್ಲೆಯ ಜನರಲ್ಲಿ ಮನೆ ಮಾಡಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಇತ್ತೀಚೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ, ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾೃನಿಂಗ್, ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಬೇಕೆಂದು ಆದೇಶಿಸಿದ್ದರು. ಈ ಸೇವೆ ನೀಡಲು ಅಗತ್ಯವಿರುವ ತಂತ್ರಜ್ಞರನ್ನು ನೇಮಕ ಮಾಡಬೇಕೆಂದೂ ಸೂಚನೆ ನೀಡಿದ್ದರು. ಅದರಂತೆ, ಮುಂದಿನ ಮೂರು ತಿಂಗಳೊಳಗೆ ಜಿಲ್ಲೆಯಲ್ಲಿ ರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳು ಸಿಗುವುದೋ ಅಥವಾ ಇಲ್ಲವೋ ಎನ್ನುವುದನ್ನು ಕಾದುನೋಡಬೇಕಿದೆ.

ಸದ್ಯಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಹೊಸ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಇಲ್ಲ. ಕೊಳ್ಳೇಗಾಲದ ತಾಲೂಕು ಆಸ್ಪತ್ರೆಯಲ್ಲಿ ಸ್ಕಾೃನಿಂಗ್ ಯಂತ್ರವಿದ್ದು, ಎಂಆರ್‌ಐ ಇಲ್ಲವಾಗಿದೆ. ಅಲ್ಲದೆ ಸಿಬ್ಬಂದಿ ನಿಯೋಜನೆ ಪ್ರಕ್ರಿಯೆ ನಡೆದಿದೆ. ಯಳಂದೂರು, ಹನೂರು, ಗುಂಡ್ಲುಪೇಟೆ ಆಸ್ಪತ್ರೆಯಲ್ಲೂ ಇಲ್ಲ. ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರಿನಲ್ಲಿ ತಾಲೂಕು ಮಟ್ಟದ ಆಸ್ಪತ್ರೆಗಳಿವೆ. ಹನೂರು ಆಸ್ಪತ್ರೆ ಇನ್ನೂ ಮೇಲ್ದರ್ಜೆಗೇರಿಲ್ಲ. ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಡಯಾಲಿಸಿಸ್ ಸೇವೆ ಲಭ್ಯವಿದೆ. ಕೊಳ್ಳೇಗಾಲದ 6 ಡಯಾಲಿಸಿಸ್ ಯಂತ್ರಗಳಲ್ಲಿ ಒಂದು ಕೆಟ್ಟು ಹೋಗಿದೆ. ಚಾಮರಾಜನಗರದಲ್ಲಿ 10, ಗುಂಡ್ಲುಪೇಟೆಯಲ್ಲಿ 3 ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ತಂತ್ರಜ್ಞರ ಕೊರತೆ ಕಾಡುತ್ತಿದೆ.

ಜಿಲ್ಲೆಯಲ್ಲಿ ಆರೋಗ್ಯ ಸೇವಾ ವ್ಯವಸ್ಥೆಗೆ ತುರ್ತು ಚಿಕಿತ್ಸೆಯ ಅಗತ್ಯ ಇದೆ. ಮಾರ್ಟಳ್ಳಿಯ ಸುಳವಾಡಿಯಲ್ಲಿ ವಿಷಪ್ರಸಾದ ಪ್ರಕರಣ ಜರುಗಿದಾಗ ಮೈಸೂರಿನ ಆಸ್ಪತ್ರೆಯನ್ನು ಆಶ್ರಯಿಸಬೇಕಾಯಿತು. ದೇಶವನ್ನೇ ಬೆಚ್ಚಿ ಬೀಳಿಸಿದ ಆಮ್ಲಜನಕ ದುರಂತ ಪ್ರಕರಣ ನಡೆದಿದ್ದು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಎನ್ನುವುದು ಮರೆಯಲು ಸಾಧ್ಯವೇ ಇಲ್ಲ.

ಸುಸಜ್ಜಿತ ಜಿಲ್ಲಾಸ್ಪತ್ರೆ ಇದ್ದರೂ ಇಂದಿಗೂ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗುತ್ತಿದೆ. ತಮಿಳುನಾಡು ಗಡಿಯಲ್ಲಿರುವ ಹನೂರಿನ ಜನರಿಗಂತೂ ಇಲ್ಲಿನ ಆರೋಗ್ಯ ಸೇವೆ ತೃಪ್ತಿಕೊಟ್ಟಿಲ್ಲ. ಮಲೆಮಹದೇಶ್ವರ ಬೆಟ್ಟ, ಗೋಪಿನಾಥಂನ ಗ್ರಾಮಸ್ಥರು ಪಕ್ಕದ ತಮಿಳುನಾಡಿಗೆ ಹೋಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆ, ಹನೂರಿನಲ್ಲಿ 100 ಹಾಸಿಗೆಗಳುಳ್ಳ ಆಸ್ಪತ್ರೆ ಸ್ಥಾಪನೆ ಪ್ರಕ್ರಿಯೆ ಈಗ ಯಾವ ಹಂತದಲ್ಲಿದೆ ಎನ್ನುವುದೂ ಜನರಿಗೆ ಗೊತ್ತಿಲ್ಲ. ಇನ್ನು ಗುಂಡ್ಲುಪೇಟೆ, ಕೊಳ್ಳೇಗಾಲ, ಯಳಂದೂರಿನವರೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನತ್ತ ಮುಖ ಮಾಡುತ್ತಾರೆ. ಇದಕ್ಕೆ ಅಂತ್ಯ ಹಾಡಬೇಕೆಂದರೆ ಸಿಬ್ಬಂದಿ ಕೊರತೆ ನೀಗಿಸಿ, ಸಕಲ ಸೌಲಭ್ಯಗಳನ್ನೂ ನೀಡಬೇಕಿದೆ.

ಬಡವರಿಗೆ ಆರ್ಥಿಕ ಹೊರೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳು ಸಿಗದೆ ಹೋದರೆ ಬಡಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವುದು ಸಾಮಾನ್ಯ. ಜಿಲ್ಲೆಯಲ್ಲಿ ಬಹುಪಾಲು ಆರ್ಥಿಕವಾಗಿ ಹಿಂದುಳಿದ ಜನರಿದ್ದು, ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿ ಎಂಆರ್‌ಐ, ಸ್ಕಾೃನಿಂಗ್ ಮತ್ತು ಇತರ ಸೌಲಭ್ಯಗಳು ಸಕಾಲಕ್ಕೆ ದೊರೆಯದೆ ಇದ್ದರೆ ಖಾಸಗಿ ಸೆಂಟರ್‌ಗಳ ಕಡೆ ಹೋಗಬೇಕು. ಅಧಿಕ ಹಣ ವ್ಯಯಿಸಿ ತಪಾಸಣೆಗಳನ್ನು ಮಾಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸೇವೆಯನ್ನು ಉತ್ತಮಗೊಳಿಸಲೇಬೇಕಿದೆ.

ಹದಗೆಟ್ಟ ವಾತಾವರಣ
ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡುವುದರ ಜತೆಗೆ ಜನಸ್ನೇಹಿ ವಾತಾವರಣ, ಆಡಳಿತವನ್ನೂ ನೀಡಬೇಕಿದೆ. ಯಡಬೆಟ್ಟದ ಬಳಿ ಇರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್) ಕೆಲವು ದಿನಗಳ ಹಿಂದೆ ವಿವಾದಕ್ಕೆ ಸಿಲುಕಿತ್ತು. ಸಿಮ್ಸ್ ನಿರ್ದೇಶಕ ಮತ್ತು ಡೀನ್ ಡಾ.ಸಂಜೀವ್ ಅಂಬೇಡ್ಕರ್‌ಗೆ ಅಪಮಾನ ಮಾಡಿದ ಆರೋಪ ಹೊತ್ತರು. ಇದೇ ಆಸ್ಪತ್ರೆಯ ಡಾ.ಮಾರುತಿ ಮತ್ತು ಇತರರು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್‌ಗೆ ದೂರು ನೀಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಪ್ರಗತಿಪರ ಸಂಘಟನೆಗಳವರು ಪ್ರತಿಭಟನೆ ಮಾಡಿ ಡಾ.ಸಂಜೀವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಳಿಕ ಡಾ.ಸಂಜೀವ್‌ಗೆ ಜಾಮೀನು ಸಿಕ್ಕಿತು. ಈ ಘಟನೆ ಜರುಗಿದ ಬಳಿಕ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಿಮ್ಸ್ ಡೀನ್ ಡಾ.ಸಂಜೀವ್ ಅವರ ಸ್ಥಾನಕ್ಕೆ ಮೈಸೂರಿನ ಡಾ.ಮಂಜುನಾಥ್ ಅವರನ್ನು ನಿಯೋಜಿಸಬೇಕೆಂದು ಸಿಎಂ ಸಿದ್ದರಾಮಯ್ಯಅವರಿಗೆ ಪತ್ರ ಬರೆದಿದ್ದರು. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ, ನಮ್ಮ ಸರ್ಕಾರ ಮೆಡಿಕಲ್ ಕಾಲೇಜು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಡಾ.ಸಂಜೀವ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದಿದ್ದರು. ಈ ಎಲ್ಲ ವಿದ್ಯಮಾನಗಳ ಬಳಿಕ ಆಸ್ಪತ್ರೆ, ಕಾಲೇಜಿನ ವಾತಾವರಣ ಸಹಜ ಸ್ಥಿತಿಯಲ್ಲಿಲ್ಲ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಸೂಚನೆಯಂತೆ ರಾಜ್ಯ ಮಟ್ಟದಲ್ಲಿ ಕ್ರಮ ವಹಿಸಬಹುದು. ಹಾಗಾಗಿ ಮುಂದಿನ ಮೂರು ತಿಂಗಳ ಒಳಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯ ಸಿಗುವ ವಿಶ್ವಾಸವಿದೆ.

ಡಾ.ವಿಶ್ವೇಶ್ವರಯ್ಯ, ಡಿಎಚ್‌ಒ, ಚಾಮರಾಜನಗರ