ಜಿಲ್ಲೆ

ಸಾವಯವ ಕೃಷಿಯಲ್ಲಿ ಖುಷಿಕಂಡ ರೈತ

ಚಾಮರಾಜನಗರ: ಸಾವಯವ ಕೃಷಿಯಲ್ಲಿ ಅಡಕೆ, ತೆಂಗು ಮತ್ತು ನಿರಂತರವಾಗಿ ತರಕಾರಿ ಸೊಪ್ಪು ಬೆಳೆಯುತ್ತಿರುವ ಯುವ ರೈತರೊಬ್ಬರು, ದುಪ್ಪಟ್ಟು ಲಾಭಗಳಿಸುತ್ತಿದ್ದಾರೆ.

ತಾಲೂಕಿನ ಕೋಡಿಮೋಳೆ ಗ್ರಾಮದ ಶಿವನಂಜಶೆಟ್ಟಿ ಮತ್ತು ಗಂಗಮ್ಮ ಅವರ ಮೂವರು ಪುತ್ರರಲ್ಲಿ ಕೊನೆಯವರಾದ ಶಿವು(ನಂಜಪ್ಪ)ಅವರು ಚಾಮರಾಜನಗರದಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. ಸರ್ಕಾರಿ ಮತ್ತು ಇನ್ನಿತರೆ ಖಾಸಗಿ ಉದ್ಯೋಗದ ಆಸೆಯನ್ನು ಇಟ್ಟುಕೊಳ್ಳದೆ ಕೃಷಿಯನ್ನು ತಮ್ಮ ಜೀವನದಲ್ಲಿ ಪ್ರಧಾನವಾಗಿಸಿಕೊಂಡಿದ್ದಾರೆ. ಗ್ರಾಮದಲ್ಲಿರುವ ಸುಮಾರು 7 ಎಕರೆ ಸ್ವಂತ ಜಮೀನಿನಲ್ಲಿ ಪ್ರಸ್ತುತ 5 ಎಕರೆಯಲ್ಲಿ ಬೇಸಾಯವನ್ನು ಮಾಡುತ್ತಿದ್ದಾರೆ. ತೆಂಗು, ಅಡಕೆ, ಬಾಳೆ, ಈರುಳ್ಳಿ, ಬಿಟ್ರೋಟ್, ಮೂಲಂಗಿ ಹಾಗೂ ಇನ್ನಿತರೆ ತರಕಾರಿ ಬೆಳೆಯ ಜತೆಗೆ ನಿರಂತರವಾಗಿ ತರಕಾರಿ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಸುಮಾರು 1 ಎಕರೆಯಲ್ಲಿ ಹಸುಗಳಿಗೆ ಮೇವಿನ ಬೆಳೆಯನ್ನು ಬೆಳೆದಿದ್ದಾರೆ. ಕೃಷಿಯ ಜತೆಗೆ ಹೈನುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಯುವರೈತ ಶಿವು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.

ಇದರಿಂದ ನಿರಂತರವಾಗಿ ಬೇಸಾಯದಲ್ಲಿ ಲಾಭವನ್ನು ಕಾಣುತ್ತಿದ್ದಾರೆ. ಹಲವು ವರ್ಷಗಳಿಂದ ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದ ಶಿವು ಕುಟುಂಬ ಇತ್ತೀಚೆಗೆ ಎರಡು ಬೋರ್‌ವೆಲ್ ಕೊರೆಸಿದ್ದು, ಅದೇ 5 ಎಕರೆ ಜಮೀನಿಗೆ ನೀರಿನ ಮೂಲವಾಗಿದೆ. ಅದರಿಂದಾಗಿ ನೀರಿಗೆ ಯಾವುದೇ ಸಮಸ್ಯೆ ತಲೆದೋರುತ್ತಿಲ್ಲ. ಇನ್ನು ಯುವರೈತ ಶಿವು ಅವರಿಗೆ ಅವರ ತಾಯಿ ಮತ್ತು ಸಹೋದರರು ಬೆನ್ನೆಲುಬಾಗಿ ನಿಂತಿದ್ದು, ವ್ಯವಸಾಯದಲ್ಲಿ ನಿರಂತರವಾಗಿ ಸಹಕಾರ ನೀಡುತ್ತಾ ಬಂದಿದ್ದಾರೆ. ಸಾವಯವ ಬೇಸಾಯದಿಂದ ಹೆಚ್ಚು ಇಳುವರಿಯ ಜತೆಗೆ ವರ್ಷದಲ್ಲಿ 10-12 ಲಕ್ಷ ರೂ. ಲಾಭ ಗಳಿಸುವ ಮೂಲಕ ಯುವರೈತ ಶಿವು ಅವರು ಕೃಷಿ ಮಾಡುತ್ತಲೇ ಉತ್ತಮವಾದ ಬದುಕು ಕಟ್ಟಿಕೊಂಡಿದ್ದಾರೆ.

ದನದ ಗೊಬ್ಬರವೇ ಆಧಾರ:
ಜಮೀನಿನಲ್ಲಿ ಸುಮಾರು 2-3 ಟ್ರ್ಯಾಕ್ಟರ್‌ನಷ್ಟು ಗೊಬ್ಬರ ಸಂಗ್ರಹಿಸಬಹುದಾದ ತೊಟ್ಟಿಯನ್ನು ನಿರ್ಮಾಣ ಮಾಡಲಾಗಿದ್ದು, ದನದ ಗೊಬ್ಬರವೇ ಶಿವು ಅವರ ಕೃಷಿಗೆ ಆಧಾರವಾಗಿದೆ.ಇತ್ತೀಚಿನ ದಿನಗಳಲ್ಲಿನ ರಾಸಾಯನಿಕ ಗೊಬ್ಬರ ಬಳಕೆ ಮಾಡಿ ದುಂದುವೆಚ್ಚ ಮಾಡುವ ರೈತರ ನಡುವೆ ಇವರು ವಿಶೇಷವಾಗಿ ಕಾಣುತ್ತಾರೆ. ಹೈನುಗಾರಿಕೆಗಿಂತ ಮುಖ್ಯವಾಗಿ ಗೊಬ್ಬರಕ್ಕಾಗಿಯೇ ಸುಮಾರು 5-6 ಹಸುಗಳನ್ನು ಸಾಕುತ್ತಿದ್ದಾರೆ. ಗೊಬ್ಬರದ ತೊಟ್ಟಿಯಲ್ಲಿ ಯಾವಾಗಲೂ ಗೊಬ್ಬರ ಸಂಗ್ರಹವಿರುವುದರಿಂದ ಹಾಗೂ ಅದನ್ನು ನಿರಂತರವಾಗಿ ಕೊಳೆಸುವುದರಿಂದ ಬೆಳೆಗಳಿಗೆ ಸಹಕಾರಿಯಾಗಿದೆ. ತೆಂಗು ಮತ್ತು ಅಡಕೆ ಮರಗಳು ಉತ್ತಮವಾಗಿ ಬೆಳೆಯುತ್ತಿರುವುದಕ್ಕೆ ಸಾವಯವ ಮಾದರಿಯಲ್ಲಿ ದನದ ಗೊಬ್ಬರವನ್ನು ನಿರಂತರವಾಗಿ ನೀಡುತ್ತಿರುವುದೇ ಕಾರಣವಾಗಿದೆ. ಜಮೀನಿಗೂ ನಿರಂತರವಾಗಿ ದನದ ಗೊಬ್ಬರವನ್ನೇ ಬಳಕೆ ಮಾಡುವುದರಿಂದ ತರಕಾರಿ ಮತ್ತು ತರಕಾರಿ ಸೊಪ್ಪುಗಳನ್ನು ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತಿದೆ. ತೆಂಗು, ಅಡಕೆ ವರ್ಷದ ಬೆಳೆಯಾಗಿರುವುದರಿಂದ ತರಕಾರಿಯಲ್ಲಿ ನಿತ್ಯವೂ ಲಾಭ ನೋಡುವಂತಾಗಿದೆ.

ತರಕಾರಿ ಬೆಳೆಯಲ್ಲಿ ಲಾಭ:
ಸುಮಾರು 2 ಎಕರೆ ಜಮೀನಿನಲ್ಲಿ ಈರುಳ್ಳಿಯನ್ನು ಬೆಳೆದಿದ್ದು, 1.20 ಎಕರೆ ಜಮೀನಿನಲ್ಲಿ ತರಕಾರಿ ಹಾಗೂ ತರಕಾರಿ ಸೊಪ್ಪನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ. ಪ್ರಸ್ತುತ ಈರುಳ್ಳಿ, ಮೂಲಂಗಿ ಹಾಗೂ ಬಿಟ್ರೋಟ್ ತರಕಾರಿ ಬೆಳೆಯಲಾಗಿದೆ. ಕೊತ್ತಂಬರಿ, ಪುದೀನ, ಸಬಸಿಗೆ, ಮೆಂತೆ, ಪಾಲಾಕ್, ದಂಡು, ಕಿಲ್ಲಕಿರ, ಚಕ್ಕೋತಾ ಹಾಗೂ ಇನ್ನಿತರೆ ತರಕಾರಿ ಸೊಪ್ಪುಗಳನ್ನು ಹಾಕಲಾಗಿದೆ. ದನದ ಗೊಬ್ಬರ ಬಳಕೆ ಮಾಡುವುದರಿಂದ ಶಿವು ಅವರ ತೋಟದಲ್ಲಿ ತರಕಾರಿ ಸೊಪ್ಪು ನಳನಳಿಸುತ್ತಿದೆ. ತಾವೇ ಸ್ವತಃ ಕೂಯ್ಲು ಮಾಡುವ ಶಿವು ಅವರು ತಾವು ಬೆಳೆದ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಸಾಕಷ್ಟು ಲಾಭ ಗಳಿಸುತ್ತಿದ್ದಾರೆ. ಸ್ವಂತ ಟಾಟಾ ಎಸಿ ವಾಹನವನ್ನು ಇದಕ್ಕಾಗಿಯೇ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಟ್ರ್ಯಾಕ್ಟರ್ ಖರೀದಿಸುವ ಯೋಜನೆ ಹಾಕಿಕೊಂಡಿದ್ದಾರೆ. ಅದಲ್ಲದೇ ಉಳಿದಿರುವ 2 ಎಕರೆ ಜಮೀನಿನಲ್ಲಿ ಕುರಿಸಾಕಾಣಿಕೆ ಮಾಡುವ ಯೋಚನೆ ಮಾಡುತ್ತಿದ್ದು, ಸೆಡ್ಡು ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಕುಟುಂಬದ ಸಹಕಾರ:
ಕೋಡಿಮೋಳೆ ಗ್ರಾಮದ ಯುವರೈತ ಶಿವು ಅವರ ಬೇಸಾಯದ ಬದುಕಿಗೆ ತಾಯಿ ಗಂಗಮ್ಮ ಹಾಗೂ ಇಬ್ಬರು ಅಣ್ಣಂದಿರು ಸಹಕಾರವಾಗಿ ನಿಂತಿದ್ದಾರೆ. ಜಮೀನಿನ ಕೆಲಸಗಳಿಗೆ ತಮ್ಮನಿಗೆ ನೆರವಾಗುತ್ತಾರೆ. ಶಿವು ಅವರು ಸೊಪ್ಪು ಮಾರಾಟಕ್ಕೆ ಹೋದಾಗ ನಿತ್ಯವೂ ಸೊಪ್ಪು ಕೂಯ್ಲು ಮಾಡಲು ಹಾಗೂ ಇನ್ನಿತರೆ ಕೆಲಸ ಕಾರ್ಯಗಳಲ್ಲಿ ಅಣ್ಣಂದಿರು ಜತೆಯಾಗುತ್ತಾರೆ. ಈ ಮೊದಲು ನೀರಿಗೆ ತೊಂದರೆಯಾಗಿತ್ತು ಸಹೋದರರ ಸಹಕಾರದಿಂದ, ಸರ್ಕಾರದಿಂದ ನೆರವು ಪಡೆದು ಗಂಗಾಕಲ್ಯಾಣ ಯೋಜನೆಯಡಿ ಎರಡು ಬೋರ್ ಕೊರೆಸಿದ್ದು, ಪ್ರಸ್ತುತ ತಾವು ಬಳಕೆ ಮಾಡಿಕೊಂಡು ಬೇರೆಯವರ ವ್ಯವಸಾಯಕ್ಕೂ ನೀರು ನೀಡಬಹುದಾದ ಪರಿಸ್ಥಿತಿ ಇದೆ. ಪದವಿ ಪಡೆದುಕೊಂಡು ಕೂಲಿ ಕೆಲಸಕ್ಕೆ ಹೋಗುತ್ತಿದ್ದವರಿಗೆ ಇಂದು ಕೃಷಿ ಕೈಹಿಡಿದು, ನಿರಂತರ ಲಾಭವನ್ನು ತಂದುಕೊಡುತ್ತಿದೆ. ಈ ನಿಟ್ಟಿನಲ್ಲಿ ಯುವರೈತ ಶಿವು ಸಾವಯವ ಕೃಷಿಯನ್ನೇ ಪ್ರಧಾನವಾಗಿಸಿಕೊಂಡು, ಇದರಲ್ಲೇ ಮತ್ತಷ್ಟು ಸಾಧನೆ ಮಾಡಬೇಕು ಎನ್ನುವ ಕನಸು ಒತ್ತುಕೊಂಡಿದ್ದಾರೆ.

ಈ ಮೊದಲು ನಾನು ಬೇರೆಯವರ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಸಾವಯವ ಬೇಸಾಯವನ್ನು ಅಳವಡಿಸಿಕೊಂಡು ನಿರಂತರ ತರಕಾರಿ ಬೆಳೆಯುತ್ತಿರುವುದರಿಂದ ನಾನೇ ಈಗ ಬೇರೆಯವರಿಗೆ ಕೆಲಸ ಕೊಡುವಂತಾಗಿದ್ದೇನೆ. ಕೃಷಿಯಲ್ಲಿ ಬದುಕು ತೃಪ್ತಿಕರವಾಗಿದೆ.-ಶಿವು(ನಂಜಪ್ಪ), ಯುವರೈತ, ಕೊಡಿಮೋಳೆ, ಚಾಮರಾಜನಗರ