ಚಾಮರಾಜನಗರ:ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗಾಭ್ಯಾಸ ಅತ್ಯಂತ ಸಹಕಾರಿ ಎಂದು ಹಿರಿಯ ವೈದ್ಯಕೀಯ ತಜ್ಞೆ ಡಾ.ಸಿ.ಎಸ್.ಉಮಾರಾಣಿ ತಿಳಿಸಿದರು.
ನಗರದ ನ್ಯಾಯಾಲಯ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗಾಭ್ಯಾಸದಲ್ಲಿ ಭಾಗವಹಿಸಿ ಮಾತನಾಡಿದರು.
ಅನಾದಿಕಾಲದಿಂದಲೂ ಯೋಗಾಭ್ಯಾಸವೂ ದೇಹವನ್ನು ದಂಡಿಸಿ, ಏಕಾಗ್ರತೆ ಪಡೆಯಲು ಹಾಗೂ ಕೋಪ ಮತ್ತು ಒತ್ತಡದಿಂದ ದೂರಾಗಲು ಸಾಧು ಸಂತರು, ಋಷಿ ಮುನಿಗಳು ಅಳವಡಿಸಿಕೊಂಡು ಬಂದಿದ್ದಾರೆ. ಇತ್ತೀಚಿನ ಜೀವನ ಶೈಲಿ ಬದಲಾವಣೆಯಿಂದ ಅನೇಕ ರೋಗಗಳು ಕಾಣಿಸಿಕೊಂಡು, ಚಿಕ್ಕ ವಯಸ್ಸಿನಲ್ಲೇ ಜನರು ಮಾನಸಿಕ ತೊಳಲಾಟಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಗದಿಂದ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬಹುದಾಗಿದೆ ಎಂದರು.
ನಮ್ಮ ದೇಹದಲ್ಲಿನ ಹೃದಯದ ರಕ್ತಪರಿಚಲನೆ ಸರಾಗವಾಗಿ ನಡೆಯಲು, ದೇಹದಲ್ಲಿನ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಲು ಯೋಗ ಉಪಯುಕ್ತವಾಗಿದೆ. ದಿನದಲ್ಲಿ 2 ಬಾರಿ ಯೋಗಾಭ್ಯಾಸ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು ಹಾಗೂ ಇನ್ನತರೆ ಕಾಯಿಲೆಗಳು ಬರದಂತೆ ನೋಡೊಕೊಳ್ಳಬಹುದಾಗಿದೆ. ದೈನಂದಿನ ಚಟುವಟಿಕೆಯಲ್ಲಿ ವ್ಯಾಯಾಮ, ಪೌಷ್ಠಿಕಾಂಶಭರಿತ ಆಹಾರ ಸೇವನೆ ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯವೋ ನಿಯಮಿತವಾದ ಯೋಗಾಭ್ಯಾಸವೂ ಅಷ್ಠೇ ಮುಖ್ಯವಾಗಿದೆ ಎಂದು ತಿಳಿಸಿದರು.