ಚಾಮರಾಜನಗರ: ವಿಧಾನಸಭೆ ಚುನಾವಣೆ ಗೆಲುವವರೆಗೂ ನಾವು ಎಂದ ನಮ್ಮ ಕೆಲವು ನಾಯಕರು ಗೆದ್ದ ಮೇಲೆ ನಾನು ಎನ್ನಲು ಶುರು ಮಾಡಿದ್ದಕ್ಕೆ ಕಳೆದ ಚುನಾವಣೆಯಲ್ಲಿ ಸೋಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ವ್ಯಾಖ್ಯಾನಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಿಜೆಪಿ ಕಮಿಟಿ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮದೇ ತಪ್ಪುಗಳಿಂದ ರಾಜ್ಯದಲ್ಲಿ ಅಧಿಕಾರದಿಂದ ದೂರ ಉಳಿದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದೇವೆ. ಚುನಾವಣೆಗಾಗಿ ಕಾರ್ಯಕರ್ತರು ಹಗಲಿರುಳು ದುಡಿದಿದ್ದಾರೆ. ಆದರೆ ನಮ್ಮ ನಾಯಕರು ಚುನಾವಣೆಯಲ್ಲಿ ಗೆಲ್ಲುವವರೆಗೂ ನಾವು ಎಂದು ಹೇಳಿ ಬಳಿಕ ನಾನು ಎಂದು ಹೇಳಿ ಈ ರೀತಿ ಆಗಿದೆ ಎಂದರು.
ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಮುಖಂಡರು ಮತ್ತು ಕಾರ್ಯಕರ್ತರ ಸಂಬಂಧ ಚೆನ್ನಾಗಿತ್ತು. ಅಧಿಕಾರಕ್ಕೆ ಬಂದ ಬಳಿಕವೇ ಹಳಿಸಿದ್ದು. ನಾವು ಎನ್ನುವ ಬದಲು ನಾನು ಎಂದಾಗ ಹಿನ್ನೆಡೆ ಆರಂಭವಾಯಿತು. ನಾನು ಭವಿಷ್ಯದ ಬಗ್ಗೆ ವಿಶ್ವಾಸವಿಟ್ಟುಕೊಂಡಿರುವವನು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಇದ್ದ ವಾತಾವರಣ ಈಗ ಇಲ್ಲ. ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಅಲೆ ಎಬ್ಬಿಸಿತು. ಗ್ಯಾರಂಟಿ ಯೋಜನೆಗಳನ್ನು ತೆಗೆದುಕೊಂಡು ಹೋಗ ಕಾಂಗ್ರೆಸ್‌ಗೆ ಈ ರಾಜ್ಯಗಳಲ್ಲಿ ಅವಕಾಶ ಸಿಗಲಿಲ್ಲ ಎಂದು ಹೇಳಿದರು.
ನನಗೆ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ಸಿಕ್ಕ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ನನ್ನ ಹೆಸರು ೋಷಣೆಯಾಗುತ್ತಿದ್ದಂತೆಯೇ ಬಿ.ಎಸ್.ಯಡಿಯೂರಪ್ಪ ಆಶೀರ್ವಾದ ಮಾಡಿ ಎಷ್ಟೆಲ್ಲಾ ಹಿರಿಯರು ಇದ್ದರೂ ನಿನಗೆ ಜವಾಬ್ದಾರಿ ಸಿಕ್ಕಿದೆ. ರಾಜ್ಯದ ಎಲ್ಲೆಡೆ ಪ್ರವಾಸ ಮಾಡಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಬೇಕು ಎಂದು ಸೂಚನೆ ನೀಡಿದರು. ನಮಗೆ 28 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಅಧಿಕಾರವಧಿಯಲ್ಲಿ ಭ್ರಷ್ಟಾಚಾರ ಮಾಡಿಲ್ಲ. ಮೂರನೇ ಬಾರಿಗೆ ಮೋದಿ ಪ್ರಧಾನ ಮಂತ್ರಿಯಾಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರೈತರಿಗಾಗಿ ಪ್ರಧಾನ ಮಂತ್ರಿ ನರೇಂದ್ರಮೋದಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿ 6 ಸಾವಿರ ರೂ. ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಸರ್ಕಾರದಿಂದ 4 ಸಾವಿರ ರೂ. ಕೊಟ್ಟಿದ್ದರು. ಇದನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದರೆ ಇದನ್ನು ಪ್ರಶ್ನೆ ಮಾಡಿ. ಗ್ಯಾರಂಟಿ ಯೋಜನೆಗಳಿಂದಾಗಿ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನೇ ಕೇಳಿ ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಕಷ್ಟಕ್ಕೆ ಸ್ಪಂದಿಸಿಲ್ಲ. ಚುನಾವಣೆ ಬಂದಾಗ ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಾರೆ. ಅವರ ಅಂತ್ಯಕ್ರಿಯೆಗೆ ಜಾಗ ನೀಡಲಿಲ್ಲ. ಚುನಾವಣೆಗೆ ನಿಂತಾಗ ಸೋಲಿಸಿದರು. ರಾಜ್ಯದ ಮತದಾರರು ಮೂರ್ಖರು ಎಂದು ಕಾಂಗ್ರೆಸ್‌ನವರು ಭಾವಿಸಿದ್ದಾರೆ. ಎಲ್ಲರ ವಿರುದ್ಧ ವಿಷ ಬೀಜ ಬಿತ್ತುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆ ಕೇಸ್‌ನಲ್ಲಿ ಮುಖಂಡನ್ನು ಅರೆಸ್ಟ್ ಮಾಡಿದ್ದಾರೆ. ಸಿದ್ದು ಸರ್ಕಾರ ಬಂದ ಮೇಲೆ ಹಿಂದುಗಳನ್ನು ಸದೆ ಬಡಿಯುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಲೆಕ್ಕಕ್ಕೆ ಮಾತ್ರ. ಯಾವ ಬರ ಪರಿಹಾರ ಅಧ್ಯಯನವನ್ನೂ ಇವರು ಮಾಡಿಲ್ಲ. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರನ್ನು ಸುಮ್ಮನೆ ಬೈಯ್ಯುತ್ತಾರೆ ಎಂದು ದೂರಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ವರಿಷ್ಠರು ಬಿ.ವೈ.ವಿಜಯೇಂದ್ರ ಅವರನ್ನು ಆಯ್ಕೆ ಮಾಡಿ ಅತ್ಯುತ್ತಮ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಯಾವ ಸಣ್ಣ ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲ ಹಿರಿಯರೂ ಬಿ.ವೈ.ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲಿ ಇಲ್ಲಿ ಮಾತನಾಡುತ್ತಿದ್ದವರೂ ಈಗ ಮಾತು ನಿಲ್ಲಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರಮೋದಿ ಅವರನ್ನು ಮೂರನೇ ಬಾರಿಗೆ ಪಿಎಂ ಮಾಡುವುದು ನಮ್ಮ ಸಂಕಲ್ಪ. 28ಕ್ಕೆ 28 ಕ್ಷೇತ್ರಗಳನ್ನೂ ಗೆಲ್ಲಬೇಕು ಎಂದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಶೇ.100ರಷ್ಟು ಅನುಷ್ಠಾನಗೊಂಡಿಲ್ಲ. ಸಚಿವ ಶಿವಾನಂದ ಪಾಟೀಲ್ ರೈತರ ವಿರುದ್ಧ ಹೇಳಿಕೆ ನೀಡುವ ಮೊದಲು ಅವರು ತಿನ್ನುವ ರೊಟ್ಟಿಯ ಹಿಂದೆ ಅನ್ನದಾತರ ಬೆವರು ಇದೆ ಎನ್ನುವುದನ್ನು ತಿಳಿಯಬೇಕು. ಕಳೆದ ಚುನಾವಣೆಯಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ಗೆದ್ದಿದ್ದಾರೆ. ಅವರ ಹೆಸರು ಉಳಿಸಲು ಈ ಸಲ ಬಿಜೆಪಿ ಗೆಲ್ಲಬೇಕು. ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕು ಎಂದು ಕರೆ ಕೊಟ್ಟರು. ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ಮಾಜಿ ಶಾಸಕ ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಮಾಜಿ ಸಂಸದ ಕೋಟೆ ಶಿವಣ್ಣ, ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ನೂರೊಂದು ಶೆಟ್ಟಿ, ಮಲ್ಲೇಶ್ ನಾಯಕ, ಎಸ್.ದತ್ತೇಶ್‌ಕುಮಾರ್, ಕೆ.ಶಿವರಾಂ. ಡಾ.ಮೋಹನ್‌ಕುಮಾರ್, ವೆಂಕಟೇಶ್, ನಿಶಾಂತ್ ಮತ್ತು ಇತರರು ಹಾಜರಿದ್ದರು.
ಪಕ್ಷಕ್ಕೆ ಹೊಸ ಚೈತನ್ಯ:
ಬಿ.ವೈ.ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಹೊಸ ಚೈತನ್ಯ ಮೂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ ಎಂದು ಗುಂಡ್ಲುಪೇಟೆ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ತೋರಿಸಿ ಮೋಸ ಮಾಡಿದರು. ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ. ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಸಿಎಂ ಸಿದ್ದರಾಮಯ್ಯ 5 ಗ್ಯಾರಂಟಿಗಳನ್ನು ಜಾರಿ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಶಕ್ತಿ ಯೋಜನೆ ಜಾರಿ ಮಾಡಿ ಜನರು ಬಸ್ ಹತ್ತಲಾಗದಂತೆ ಮಾಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳು ಕಷ್ಟ ಪಡುತ್ತಿದ್ದಾರೆ. ನಿಜವಾದ ಪ್ರಯಾಣಿಕ ಸಂಚಾರ ಮಾಡು ಸಾಧ್ಯವಾಗುತ್ತಿಲ್ಲ. 200 ಯೂನಿಟ್ ವಿದ್ಯುತ್ ಕೊಟ್ಟಿಲ್ಲ. ಯುವನಿಧಿಗೆ ನಿಯಮಾವಳಿ ಮಾಡಿ ನಿರುದ್ಯೋಗಿಗಳಿಗೆ ದ್ರೋಹ ಬಗೆದರು. ಗೃಹಲಕ್ಷ್ಮೀ ಯೋಜನೆ ಶೇ.50ರಷ್ಟು ಮಾತ್ರ ತಲುಪುತ್ತಿದೆ. ಕೊಟ್ಟಂತೆ ಮಾಡಿ ಕಸಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಜ.22ರಂದು ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಇದ್ದು, ಎಲ್ಲರ ಮನೆಗಳಲ್ಲೂ ದೀಪ ಬೆಳಗಿ. ಬಿ.ಎಸ್.ಯಡಿಯೂರಪ್ಪ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತಂದರು. ಸಂಸದ ವಿ.ಶ್ರೀನಿವಾಸಪ್ರಸಾದ್ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಈ ಸಲ ಬಿಜೆಪಿಯನ್ನು ನಾವು ಗೆಲ್ಲಿಸೋಣ ಎಂದು ಹೇಳಿದರು.