ಜಿಲ್ಲೆ

ನಗರದಲ್ಲಿ ಬೀದಿ ದೀಪಗಳದ್ದೇ ಸಮಸ್ಯೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಬೀದಿ ದೀಪಗಳು ಇಲ್ಲದ ಕಂಬಗಳು, ಸಮರ್ಪಕವಾಗಿ ವಿದ್ಯುತ್‌ಕಾಣದ ರಸ್ತೆಗಳು, ದುರಸ್ತಿ ಕಾಣದ ಬೀದಿ ದೀಪಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಕುರಿತು ನಗರದ ನಿವಾಸಿಗಳು ನಗರಸಭೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ರಸ್ತೆ, ಸಂತೇಮರಹಳ್ಳಿ ವೃತ್ತದಿಂದ ರೇಷ್ಮೆ ಮಾರುಕಟ್ಟೆ ವರೆಗಿನ ರಾಷ್ಟ್ರೀಯ ಹೆದ್ದಾರಿ, ಗಾಳಿಪುರ ಬಡಾವಣೆಗೆ ಸಾಗುವ ರಸ್ತೆ, ನ್ಯಾಯಾಲಯ ರಸ್ತೆ, ಕುಲುಮೆ ರಸ್ತೆ ಹಾಗೂ ಇನ್ನಿತರೆ ಪ್ರಮುಖ ರಸ್ತೆಗಳಲ್ಲಿ ನಗರಸಭೆ ವತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ಬೀದಿದೀಪ ಅಳವಡಿಸಲು ನೂರಾರು ಕಂಬಗಳನ್ನು ನೆಟ್ಟಿದ್ದು, ಸಾಕಷ್ಟು ವರ್ಷಗಳಿಂದ ಈ ಕಂಬಗಳಿಗೆ ಬೀದಿ ದೀಪಗಳನ್ನು ಅಳವಡಿಸದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಅದಲ್ಲದೇ ನಗರದ ಬಿ.ರಾಚಯ್ಯ ಜೋಡಿರಸ್ತೆ, ಡಿವಿಯೇಷನ್ ರಸ್ತೆ, ಸತ್ತಿ ರಸ್ತೆ, ಗುಂಡ್ಲುಪೇಟೆ ರಸ್ತೆ, ಪಾಲಿಟೆಕ್ನಿಕ್ ಕಾಲೇಜು ರಸ್ತೆ, ಕರಿನಂಜನಪುರ ರಸ್ತೆ, ಇನ್ನಿತರೆ ರಸ್ತೆ ಹಾಗೂ ಪ್ರಮುಖ ಬಡಾವಣೆಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಕೆಟ್ಟು ನಿಂತಿದ್ದು, ಸಾಕಷ್ಟು ಕಡೆಗಳಲ್ಲಿ ಸರಿಯಾಗಿ ಬೀದಿದೀಪಗಳು ಸರಿಯಾಗಿ ಬೆಳಕಿ ನೀಡುತ್ತಿಲ್ಲ. ಕೆಲವು ಬಡಾವಣೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದೇ ಬೀದಿ ದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದರಿಂದಾಗಿ ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಓಡಾಡಲು ಹಾಗೂ ವಾಹನ ಸವಾರರ ಸಂಚಾರಕ್ಕೂ ತೊಡಕುಂಟಾಗಿದೆ.

ಇಷ್ಟಾದರೂ ಬೀದಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆ ಮಾಡಲು ನಗರಸಭೆ ವತಿಯಿಂದ ಸೂಕ್ತ ಅನುದಾನ ಬಿಡುಗಡೆ ಮಾಡದೇ ಕತ್ತಲಿನಲ್ಲಿ ಜನರು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸಾಕಷ್ಟು ಬಾರಿ ನಗರಸಭಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಗಳ ನಿವಾಸಿಗಳು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಸ್ತೆ ಬದಿಯಲ್ಲಿ ಖಾಲಿ ಕಂಬಗಳು:
ನಗರದ ಹಲವು ರಸ್ತೆಗಳಲ್ಲಿ ಬೀದಿದೀಪಗಳನ್ನು ಅಳವಡಿಸಲು ಹಲವು ವರ್ಷಗಳಿಂದ ಕಂಬಗಳನ್ನು ನಿಲ್ಲಿಸಲಾಗಿದ್ದು, ದೀಪಗಳನ್ನು ಅಳವಡಿಸದೇ ಖಾಲಿಯಾಗಿ ನಿಂತಿದೆ. ಜಿಲ್ಲಾ ಕ್ರೀಡಾಂಗಣದ ರಸ್ತೆ, ಸಂತೇಮರಹಳ್ಳಿ ರಸ್ತೆ ಹಾಗೂ ಇನ್ನಿತರೆ ರಸ್ತೆಗಳಲ್ಲಿ ಬೀದಿದೀಪದ ಕಂಬಗಳನ್ನು ಅಳವಡಿಸಿ ವರ್ಷಗಳೇ ಕಳೆದಿದ್ದು, ಇಂದಿಗೂ ಬೀದಿದೀಪಗಳನ್ನು ಸಂಪರ್ಕ ಕಲ್ಪಿಸಿಲ್ಲ. ಈಗಾಗಲೇ ಹಲವು ಕಂಬಗಳು ಬೀಳುವ ಸ್ಥಿತಿಗೆ ಬಂದಿದ್ದು, ಹಲವು ಕಡೆಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದೆ. ಹಲವಿ ಬಡಾವಣೆಗಳಲ್ಲಿ ಈಗ ಅಳವಡಿಸಿರುವ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ನೂರಾರು ಬೀದಿದೀಪಗಳು ಕೆಟ್ಟುನಿಂತು ವರ್ಷಗಳೆ ಕಳೆದಿದೆ. ಆದರೂ ಯಾವುದನ್ನು ಮತ್ತೆ ದುರಸ್ಥಿ ಮಾಡಿಲ್ಲ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ಹಲವಾರು ಬಡಾವಣೆಗಳ ನಿವಾಸಿಗಳು ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿದೀಪಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾತ್ರಿಯಲ್ಲಿ ಸಂಚಾರಕ್ಕೆ ತೊಂದರೆ:
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ರಸ್ತೆಯಲ್ಲಿ ಬೀದಿದೀಪ ಅಳವಡಿಸಲು ಕಂಬಗಳನ್ನು ಅಳವಡಿಸಿ ವರ್ಷಗಳೇ ಕಳೆದಿದ್ದು, ದೀಪಗಳನ್ನು ಅಳವಡಿಸದೇ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದೆ. ಇದೇ ರಸ್ತೆಯಲ್ಲಿ ಮಹದೇಶ್ವರ ಬಡಾವಣೆ, ಪೊಲೀಸ್ ವಸತಿ ನಿಲಯ ಹಾಗೂ ಬಹುಮುಖ್ಯವಾಗಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣೆಗಳು ಬರುವುದರಿಂದ ಸಾಕಷ್ಟು ಜನರು ರಾತ್ರಿಯ ವೇಳೆಯಲ್ಲಿ ಸಂಚರಿಸುತ್ತಾರೆ. ಯುವಜನ ಮತ್ತು ಕ್ರೀಡಾ ಇಲಾಖೆಯ ಹಾಸ್ಟೆಲ್ ಸಹ ಇಲ್ಲೇ ಬರುವುದರಿಂದ ಈ ರಸ್ತೆಯಲ್ಲಿ ಅಗತ್ಯವಾಗಿ ವಿದ್ಯುತ್ ದೀಪಗಳನ್ನು ಅಳವಡಿಸಬೇಕಿದೆ. ಇಲ್ಲಿ ಬೀದಿ ದೀಪಗಳು ಇಲ್ಲದೆ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ. ಈಗಾಗಲೇ ಹಲವಾರು ಬೀದಿ ದೀಪಗಳ ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ನಿವಾಸಿ ಶಂಕರ್ ಎಸ್.ಅಂಕನಶೆಟ್ಟಿಪುರ ಬೇಸರ ಹೊರಹಾಕಿದರು.

ನಗರದ ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳಲ್ಲೇ ಬೀದಿದೀಪಗಳು ಕೆಟ್ಟು ನಿಂತಿದೆ. ಹಲವು ರಸ್ತೆಗಳಲ್ಲಿ ಬೀದಿ ದೀಪಗಳ ಅಳವಡಿಕೆಗೆ ಕಂಬಗಳನ್ನು ಅಳವಡಿಸಿ ವರ್ಷಗಳು ಕಳೆದಿದ್ದರೂ ವಿದ್ಯುತ್ ಸಂಪರ್ಕ ಕಲ್ಪಸಿಲ್ಲ. ಈಗಾಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ.-ಅಕ್ಷಯ್ ಕುಮಾರ್, ರಾಮಸಮುದ್ರ ಬಡಾವಣೆ, ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದ ರಸ್ತೆಯ ಎರಡು ಬದಿಯಲ್ಲಿ ಬೀದಿದೀಪಗಳನ್ನು ಅಳವಡಿಸಲು ಕಂಬಗಳನ್ನು ನೆಟ್ಟಿದ್ದಾರೆ. ಆದರೆ ಈವರೆಗೂ ಬೀದಿದೀಪ ಅಳವಡಿಸದೇ ಸಾರ್ವಜನಿಕರಿಗೆ ರಾತ್ರಿ ವೇಳೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.-ಶಂಕರ್ ಸಿ.ಅಂಕನಶೆಟ್ಟಿಪುರ, ನಿವಾಸಿ, ಚಾಮರಾಜನಗರ ನಗರಸಭೆಯ 15ನೇ ಹಣಕಾಸು ಯೋಜನೆಯಲ್ಲಿ ಕಂಬಗಳನ್ನು ಅಳವಡಿಸಲಾಗಿದೆ. ಎಲ್‌ಇಡಿ ಬಲ್ಪ್‌ಗಳನ್ನು ಅಳವಡಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶದಂತೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಶೀಘ್ರದಲ್ಲೇ ಖಾಲಿ ಇರುವ ಕಂಬಗಳಿಗೆ ಹಾಗೂ ಉಳಿದ ಎಲ್ಲಾ ಬೀದಿದಿಪಗಳನ್ನು ಎಲ್‌ಇಡಿಯಾಗಿ ಪರಿವರ್ತಿಸಲಾಗುವುದು.-ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ