ಚಾಮರಾಜನಗರ: ರಾಮಮಂದಿರ ಉದ್ಘಾಟನೆ ಸಮಯದಲ್ಲಿ ಗೋದ್ರಾ ಹತ್ಯೆಕಾಂಡದಂತಹ ಕೃತ್ಯ ನಡೆಯಬಹುದು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಕೂಡಲೇ ಬಂಧಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಗೋದ್ರಾ ಹತ್ಯಾಕಾಂಡದಂತಹ ಕೃತ್ಯ ಜರುಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದಿಂದ ಹೊರಗಡೆ ನಿಂತು ಇದನ್ನು ಮಾತನಾಡುತ್ತಿದ್ದಾರೆ ಎಂದರೆ ಇದನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ.
ಈ ಮೂಲಕ ಮುಸ್ಲಿಂ ಜನರನ್ನು ಆತಂಕಕ್ಕೆ ನೂಕಿ, ಅಂತಹ ಕೃತ್ಯವನ್ನು ನಡೆಸಲು ಕಾಂಗ್ರೆಸ್‌ನವರು ಮುಂದಾಗಿದ್ದಾರೆ. ರಾಮಮಂದಿರ ಉದ್ಘಾಟನೆ ಮಾಡುವ ಸಮಯದಲ್ಲಿ ದೇಶದಾದ್ಯಂತ ಕೋಮುಗಲಭೆ ಸೃಷ್ಟಿಸಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮುಂದಾಗಿದೆ ಎನ್ನುವ ಆತಂಕ ಸೃಷ್ಟಿಯಾಗಿದೆ. ಇಂತಹ ಕಾಂಗ್ರೆಸ್ ತಂತ್ರಗಳನ್ನು ಎದುರಿಸಿಯೇ ನರೇಂದ್ರಮೋದಿ ಅವರು ಪ್ರಧಾನಿಯ ಸ್ಥಾನವನ್ನು ಅಲಂಕರಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನರು ತಕ್ಕಪಾಠ ಕಲಿಸಲಿದ್ದಾರೆ ಎಂದರು.