ಚಾಮರಾಜನಗರ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 9 ಜಾನುವಾರುಗಳನ್ನು ನಗರದ ಹೊರವಲಯದಲ್ಲಿ ಇತ್ತೀಚೆಗೆ ಬಜರಂಗದಳ ಹಾಗೂ ಯುವ ಬ್ರಿಗೇಡ್ ಕಾರ್ಯಕರ್ತರು ರಕ್ಷಣೆ ಮಾಡಿ ಪಟ್ಟಣ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ತಾಳವಾಡಿಯಿಂದ ಕೊಳ್ಳೆಗಾಲಕ್ಕೆ ಗೂಡ್ಸ್ ಆಟೋದಲ್ಲಿ 9 ಜಾನುವಾರುಗಳನ್ನು ತುಂಬಿಕೊಂಡು ಸಾಗಿಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬಜರಂಗ ದಳ ಹಾಗೂ ಯುವ ಬ್ರೀಗೇಡ್ ಕಾರ್ಯಕರ್ತರು ಸಂತೇಮರಹಳ್ಳಿ ಸರ್ಕಲ್ ಬಳಿ ತಡೆದು ತಪಾಸಣೆ ಮಾಡಿದರು. ಈ ವೇಳೆ ಆಟೋ ಡ್ರೈವರ್ ತನ್ನ ಹೆಸರನ್ನು ದಿನೇಶ್ ಎಂದು ಹೇಳಿಕೊಂಡಿದ್ದಾನೆ. ಬಳಿಕ ಜಾನುವಾರು ಸಹಿತ ವಾಹನವನ್ನು ನಗರದ ಪಟ್ಟಣ ಠಾಣೆ ಪೋಲಿಸರಿಗೆ ಒಪ್ಪಿಸಿದ ಕಾರ್ಯಕರ್ತರು ದೂರು ನೀಡಲು ಮುಂದಾಗುತ್ತಿದ್ದಂತೆ ಠಾಣೆಯಲ್ಲಿದ್ದ ಅಧಿಕಾರಿ ನಾವೇ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳುವುದಾಗಿ ತಿಳಿಸಿದರು. ಇದೀಗ ಚಾಲಕ ದಿನೇಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವೇಳೆ ಬಜರಂಗದಳದ ಪ್ರವೀಣ್, ಪೃಥ್ವಿ, ಮಂಜು, ಶ್ರೀಕಾಂತ್ ಇತರರು ಇದ್ದರು.