ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಖಾತೆ ಬದಲಾವಣೆ, ಇ-ಸ್ವತ್ತು ಹಾಗೂ ಇನ್ನಿತರೆ ಕೆಲಸಗಳು ವಿಳಂಬವಾಗುತ್ತಿದ್ದು, ಕಡತಗಳ ಶೀಘ್ರ ವಿಲೇವಾರಿಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಪೌರಾಯುಕ್ತ ರಾಮದಾಸ್ ಸೂಚಿಸಿದರು.
ನಗರದ ನಗರಸಭೆ ಕಚೇರಿಯಲ್ಲಿ ಇತ್ತೀಚೆಗೆ ಕಂದಾಯ, ಆರೋಗ್ಯ, ಇಂಜಿನಿಯರಿಂಗ್ ವಿಭಾಗ, ವಸತಿ ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ವಿಭಾಗವಾರು ಪ್ರಗತಿ ಪರಿಶೀಲನೆ ನಡೆಸಿ ಸೂಚನೆ ನೀಡಿದರು. 20 ದಿನಗಳಿಂದ ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿ-ಫಾರಂ ಗಣೀಕೃತ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಸಿಬ್ಬಂದಿ ಕೊರತೆಯಿಂದ ಸರಿಯಾದ ಸಮಯಕ್ಕೆ ಇ-ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿ, ಸೂಕ್ತ ದಾಖಲೆಗಳನ್ನು ಪಡೆದು ನಂತರ ಅರ್ಜಿದಾರರಿಗೆ ಸ್ವೀಕೃತಿ ನೀಡಬೇಕು. ಇಲ್ಲವೇ ಯಾವುದೇ ಕಾರಣಕ್ಕೆ ಅಪೂರ್ಣ ದಾಖಲಾತಿ ಪಡೆದು ಕೆಲಸ ಮಾಡಲು ಮುಂದಾಗಬೇಡಿ. ಇದರಿಂದ ನಗರಸಭೆಗೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ ಆಯಾ ವಿಭಾಗದ ಅಧಿಕಾರಿಗಳು ಪರಿಶೀಲಿಸಿ ಕಡತಗಳನ್ನು ವಿಳಂಬ ಮಾಡಿದ ಕಾರಣವನ್ನು ಹಿಂಬರಹ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಮುಂಬರುವ ಬೇಸಿಗೆಗೆ ಶುದ್ಧ ಕುಡಿಯುವ ನೀರು ಹಾಗೂ ಕಾವೇರಿ ನೀರು ಪೊರೈಕೆ ಮತ್ತು ಬೋರ್ ನೀರು ಸರಬರಾಜು ಮಾಡುವ ಬಗ್ಗೆ ಹೆಚ್ಚಿನ ನಿಗಾವಹಿಸಿ. ಇದಕ್ಕೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲು ಅನುಮತಿ ಪಡೆದು, ಟೆಂಡರ್ ಆಹ್ವಾನಿಸಬೇಕು. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಉತ್ತುವಳ್ಳಿ ಭಾಗದಲ್ಲಿ ವಸತಿರಹಿತರಿಗೆ ನೀಡುವ ಜಮೀನನ್ನು ಪರಿವರ್ತನೆ ಮಾಡಿ, ನಿವೇಶನವನ್ನಾಗಿ ಮಾರ್ಪಡು ಮಾಡಿ. ವಸತಿ ಬಡಾವಣೆ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರು ಮಾಡಬೇಕು. ಈ ಪ್ರದೇಶದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವ ಕುರಿತು ಕ್ರಿಯಾ ಯೋಜನೆಯನ್ನು ತಯಾರಿಸಿ. ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲು ಮುಂದಾಗಬೇಕು. ಖಾಲಿ ನಿವೇಶನಗಳಲ್ಲಿ ಜಂಗಲ್ ಹಾಗೂ ಕಸ ತೆರವು ಮಾಡಲು ಕ್ರಮ ವಹಿಸಬೇಕು. ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ , ವಹಿವಾಟು ಮಾಡುತ್ತಿರುವ ವರ್ತಕರು ಹಾಗೂ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕು. ಜಿಲ್ಲಾಧಿಕಾರಿ ಸೂಚನೆಯಂತೆ ಸಿಬ್ಬಂದಿ ನೀರು, ಮನೆ ಕಂದಾಯ, ವಾಣಿಜ್ಯ ಕಂದಾಯ ವಸೂಲಿ ಮಾಡಿ, ನಗರಸಭೆಗೆ ಆದಾಯ ಹೆಚ್ಚಿಸಲು ಶ್ರಮಿಸಬೇಕು ಎಂದು ಹೇಳಿದರು. ಕಂದಾಯ ಅಧಿಕಾರಿ ಶರವಣ, ಎಇಇ ನಟರಾಜು, ಪರಿಸರ ಇಂಜಿನಿಯರ್ ಗಿರಿಜಮ್ಮ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯಕ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜು, ಸುಷ್ಮಾ, ಸಿಬ್ಬಂದಿ ಹಾಜರಿದ್ದರು.