ಜಿಲ್ಲೆ

ಶಿವಾನಂದ ಪಾಟೀಲ್ ಹೇಳಿಕೆ ಖಂಡಿಸಿ ಪ್ರತಿಭಟನೆ

ಚಾಮರಾಜನಗರ: ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತ ಸಂಘದ ಕಾರ್ಯಕರ್ತರು ಬುಧವಾರ ಹೆದ್ದಾರಿ ತಡೆದು ಪ್ರತಿಭಟಿಸಿದರು.

ನಗರದ ಜಾಲಹಳ್ಳಿಹುಂಡಿ ಗ್ರಾಮದ ಸಮೀಪವಿರುವ ಸೇತುವೆಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಸಚಿವ ಶವಾನಂದ ಪಾಟೀಲ್ ವಿರುದ್ಧ ೋಷಣೆಗಳನ್ನು ಕೂಗಿ ಕಿಡಿಕಾರಿದರು. ಕೆಲಕಾಲ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯದ ರೈತರು ಬರಗಾಲ ಬರುವುದನ್ನೇ ಕಾಯುತ್ತಾರೆ ಎಂದು ಹೇಳಿಕೆ ನೀಡಿರುವ ಸಚಿವ ಶಿವಾನಂದ ಅವರ ನಡೆ ಅತ್ಯಂತ ಖಂಡನೀಯ. ಕೃಷಿ ಎಂಬುದು ಈ ನೆಲದ ಸಂಸ್ಕೃತಿಯಾಗಿದೆ. ಅದಕ್ಕೆ ಮಳೆಯೂ ಬೇಕು, ನೀರು ಬೇಕು. ಸಚಿವರು ಅದನ್ನು ತಿಳಿಯದೇ ಮೂರ್ಖರಂತೆ ವರ್ತಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ನಾಡಿನ ರೈತರು ಅವರಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಜನರಿಂದ ಆಯ್ಕೆಯಾಗಿರುವ ಸಚಿವರು ರೈತರ ಕೆಲಸ ಮಾಡಲು ಇರುವ ಸೇವಕರು. ನೀವು ಖರ್ಚು ಮಾಡುವ ಹಣ ರೈತರು, ಸಾರ್ವಜನಿಕರದ್ದಾಗಿದೆ. ಸರ್ಕಾರ ಸಾಲಮನ್ನಾ ಮಾಡುವುದು ಬೇಡ ಬದಲಾಗಿ ರೈತರ ಬೆಳೆಗಳಿಗೆ ಕನಿಷ್ಠ ಬೆಲೆಯನ್ನು ನೀಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಅವಿವೇಕಿ ಸಚಿವರನ್ನು ಸಂಪುಟದಲ್ಲಿ ಇಟ್ಟುಕೊಂಡು ಆಡಳಿತ ನಡೆಸುತ್ತಿರುವುದು ಸರಿಯಲ್ಲ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ಅವರನ್ನು ಚಾಮರಾಜನಗರಕ್ಕೆ ಬರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ಮಹೇಶ್, ಮಲ್ಲೇಶ್, ಸುರೇಶ್, ಬಾಬು, ಕಾಳಶೆಟ್ಟಿ, ಪ್ರಸಾದ್, ರಾಜು, ಅಂಬಳೆ ಶಿವಪ್ರಸಾದ್ ಹಾಗೂ ಇತರರು ಭಾಗವಹಿಸಿದ್ದರು.