ಹನೂರು: ತಾಲೂಕು ಕ್ರಿಕೆಟ್ ಕ್ಲಬ್ ವತಿಯಿಂದ ಜ.5ರಿಂದ ಮೂರು ದಿನ ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಐಪಿಎಲ್ ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು, ಈ ಸಂಬಂಧ ಸೋಮವಾರ ಬಿಡ್ಡಿಂಗ್ ಮೂಲಕ ಆಟಗಾರರನ್ನು ಆಯ್ಕೆ ಮಾಡಲಾಯಿತು.
ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬಹಿರಂಗ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ತಾಲೂಕಿನ ಮಾರ್ಟಳ್ಳಿ ಕಿರೆಪಾತಿ ತಂಡ, ಮಹದೇಶ್ವರಬೆಟ್ಟ ವಾರಿಯರ್ಸ್, ಕೌದಳ್ಳಿಯ ಟ್ರೋಪಿ ಫೈಟರ್ಸ್, ಲೊಕ್ಕನಹಳ್ಳಿಯ ಅಪ್ಪು ಟೀಮ್, ಬಂಡಳ್ಳಿಯ ಎವಿಎಂ ಟೈಟಾನ್, ದೊಡ್ಡಿಂದುವಾಡಿಯ ಇಲವೆನ್, ಹನೂರಿನ ಪವರ್ ವಾರಿಯರ್ಸ್ ಹಾಗೂ ಹಂಟರ್ಸ್ ತಂಡ ಭಾಗವಹಿಸಿದ್ದವು.
ಪಂದ್ಯಾವಳಿಯಲ್ಲಿ ಭಾಗವಹಿಸಲು 94 ಆಟಗಾರರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಐಕಾನ್ ಆಟಗಾರರನ್ನು ಹೊರತುಪಡಿಸಿ ಒಟ್ಟು 80 ಆಟಗಾರರು ವಿವಿಧ ತಂಡಗಳಿಗೆ ಆಯ್ಕೆಯಾದರು. ಹನೂರಿನ ಆಟಗಾರ ಮಹೇಶ್ 2,350 ರೂ.ಗೆ ಹನೂರು ಹಂಟರ್ಸ್ ಟೀಮ್‌ಗೆ, ಮತ್ತೊಬ್ಬ ಆಟಗಾರ ಇದ್ರೀಸ್ ಪಾಷ 2 ಸಾವಿರ ರೂ.ಗೆ ಬಂಡಳ್ಳಿ ಎವಿಎಂ ಟೈಟಾನ್ ತಂಡಕ್ಕೆ ಆಯ್ಕೆಯಾದರು.
ಕ್ರಿಕೆಟ್ ಕ್ಲಬ್ ಅಧ್ಯಕ್ಷ ಅಭಿಲಾಷ್ ಮಾತನಾಡಿ, ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಎಚ್‌ಸಿಸಿ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪ್ರಥಮ ಬಹುಮಾನ 60 ಸಾವಿರ ರೂ. ಹಾಗೂ ದ್ವಿತೀಯ ಬಹುಮಾನವಾಗಿ 40 ಸಾವಿರ ರೂ., ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೆ, ಫೇಸ್‌ಬುಕ್ ಹಾಗೂ ಯುಟ್ಯೂಬ್‌ನಲ್ಲಿ ಲೈವ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಗಿರೀಶ್, ಸೆಸ್ಕ್ ಎಇ ರಂಗಸ್ವಾಮಿ, ಕ್ಲಬ್‌ನ ಗೌರವಾಧ್ಯಕ್ಷ ಮನ್ಸೂರ್, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ರಿಜ್ವಾನ್, ಖಜಾಂಚಿ ರಿಯಾಜ್ ಇತರರು ಇದ್ದರು.