ಜಿಲ್ಲೆ

ವೈದ್ಯರ ಮೇಲಿನ ಹಲ್ಲೆಗೆ ಖಂಡನೆ

ಚಾಮರಾಜನಗರ: ನಗರದ ಹಳೇ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಬಳಿ ವೈದ್ಯರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ ಎಂದು ರಾಜ್ಯ ಕಿವಿ, ಮೂಗು ಮತ್ತು ಗಂಟಲು ತಜ್ಞರ ಸಂಘದ ಅಧ್ಯಕ್ಷ ಡಾ.ಎ.ಆರ್.ಬಾಬು ತಿಳಿಸಿದ್ದಾರೆ.

ಸಿಮ್ಸ್ ಸ್ಥಾನಿಕ (ರೆಸಿಡೆಂಟ್) ವೈದ್ಯ ಡಾ.ಲಕ್ಷ್ಮೀಕಾಂತ ಹಾಗೂ ಎಂಬಿಬಿಎಸ್ ವಿದ್ಯಾರ್ಥಿ ಲಕ್ಷ್ಮೀಪುತ್ರ ಅವರ ಮೇಲೆ ಹಲ್ಲೆ ನಡೆದಿದ್ದು, ಮಕ್ಕಳ ತಜ್ಞೆ ಡಾ.ಸ್ನೇಹ ಅವರನ್ನು ನಿಂದಿಸಲಾಗಿದೆ. ಹೀಗಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಮಾಡುವುದಾದರೂ ಹೇಗೆ? ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕೋವಿಡ್‌ನಂತಹ ಸಂದಿಗ್ಧ ಸಮಯದಲ್ಲೂ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ಇದರಿಂದ ವೈದ್ಯರು ಕೆಲಸ ಮಾಡುವ ಮನೋಸ್ಥೈರ್ಯ ಕುಸಿಯುತ್ತದೆ. ಆಸ್ಪತ್ರೆಗಳಲ್ಲಿ ವೈದ್ಯರು ನಿರ್ಭಯವಾಗಿ ಕೆಲಸ ನಿರ್ವಹಿಸಲು ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ.