ಜಿಲ್ಲೆ

ಕ್ರೀಡೆಗೆ ಸಂಪೂರ್ಣ ಸಹಕಾರ

ಹನೂರು: ಕ್ರಿಕೆಟ್ ರಾಷ್ಟ್ರೀಯ ಕ್ರೀಡೆ. ಆದ್ದರಿಂದ ಹೆಚ್ಚಿನ ಅಭ್ಯಾಸದಲ್ಲಿ ತೊಡಗುವುದರ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ದೊಡ್ಡಲತ್ತೂರು ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಅಪ್ಪು ಪ್ರೀಮಿಯರ್ ಲೀಗ್ 3ನೇ ಆವೃತಿಯ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಹನೂರು ಭಾಗದಲ್ಲಿ ಕ್ರೀಡಾಪಟುಗಳಿದ್ದು, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಆಸಕ್ತರಿದ್ದಾರೆ. ಈ ದಿಸೆಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಇದು ಕ್ರೀಡೆಗಳಲ್ಲಿ ಭಾಗವಹಿಸಲು ಸ್ಫೂರ್ತಿಯಾಗಿದೆ. ಜತೆಗೆ ಸಾಧನೆ ಮಾಡಲು ಸಹಕಾರಿಯಾಗಿದೆ. ಇಂತಹ ಪಂದ್ಯಾವಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಇದರಿಂದ ಜನರು ತುಂಬ ತೊಂದರೆ ಅನುಭವಿಸುತ್ತಿರುವುದು ನನಗೆ ತಿಳಿದಿದೆ. ಆದರೆ ಸರ್ಕಾರದಿಂದ ಸಿಗುತ್ತಿರುವ ಅನುದಾನ ಕಡಿಮೆ. ಹಾಗಾಗಿ ಈ ಸಂಬಂಧ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿ ಚರ್ಚಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕರು ಇದೇ ವೇಳೆ ತಿಳಿಸಿದರು. ಮುಖಂಡರಾದ ಮಾದೇವ, ರಾಜಣ್ಣ, ಗೋಪಾಲ್, ಆರೀಫ್ ಹಾಗೂ ಕ್ರೀಡಾಪಟುಗಳು, ಗ್ರಾಮಸ್ಥರು ಇದ್ದರು.