ಚಾಮರಾಜನಗರ: ಗ್ಯಾರಂಟಿ ಯೋಜನೆಯಲ್ಲಿ ಉಚಿತ ಅಕ್ಕಿ ನೀಡುತ್ತೇವೆ ಎಂದ ಕಾಂಗ್ರೆಸ್, ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಜತೆಗೆ 10 ಕೆಜಿಯನ್ನು ಸೇರಿಸಿ 15 ಕೆಜಿ ಅಕ್ಕಿ ನೀಡಬೇಕು ಎಂದು ಮಾಜಿ ಶಾಸಕ ಎನ್.ಮಹೇಶ್ ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ ಕಾಂಗ್ರೆಸ್‌ನವರು, ಈಗ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇವರ ಪ್ರತಿಭಟನೆ ನೋಡಿದರೆ ಕಾಂಗ್ರೆಸ್ ಮುಖಂಡರು ಉಚಿತ ಅಕ್ಕಿ ನೀಡುತ್ತೇವೆ ಎಂದು ಸುಳ್ಳು ಹೇಳಿ ಬಡವರ ಜೀವನದಲ್ಲಿ ಹುಡುಗಾಟ ಆಡುತ್ತಿದ್ದಾರೆ ಎಂಬುದು ತಿಳಿಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಿಂದ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ರಾಜ್ಯ ಸೇರಿ ದೇಶದ ಜನರಿಗೆ ಉಚಿತವಾಗಿ ನೀಡುತ್ತಾ ಬಂದಿದೆ. 2013-18 ರವರೆಗಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ 3 ರೂ. ದರದಲ್ಲಿ ಅಕ್ಕಿ ಕೊಡುತ್ತಿತ್ತು. ಕೋವಿಡ್ ಬಂದ ನಂತರ 3 ರೂ.ಗಳನ್ನು ಪಡೆಯದೆ, ರಾಜ್ಯಕ್ಕೆ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ದೇಶದ 83 ಕೋಟಿ ಕುಟುಂಬಗಳಿಗೆ ಕೇಂದ್ರದ ಗರೀಬ್ ಕಲ್ಯಾಣ ಯೋಜನೆ ನೆರವಾಗಿದೆ. ಆದರೆ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ ಕಾಂಗ್ರೆಸ್‌ನವರು ಈಗ ಅಧಿಕಾರಕ್ಕೆ ಬಂದ ಬಳಿಕ ಕೇಂದ್ರ ಸರ್ಕಾರ ಅಕ್ಕಿ ಕೊಡುವುದನ್ನು ನಿಲ್ಲಿಸಿದೆ ಎಂದು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆವರೆಗೂ ಈ ವಿಚಾರವನ್ನು ಜೀವಂತವಾಗಿ ಉಳಿಸಲು ಕಾಂಗ್ರೆಸ್ ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ಪ್ರಣಾಳಿಕೆಯ ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಕೊಡದಿದ್ದರೆ ಕಾಂಗ್ರೆಸ್‌ನವರು ಬಡವರ ವಿರೋಧಿ ಆಗುತ್ತಾರೆ ಎಂದು ಎಚ್ಚರಿಸಿದರು.
ರಾಜ್ಯದ ಜನರಿಗೆ ಜು.1 ರಿಂದ ಕೇಂದ್ರದ 5 ಕೆಜಿ ಅಕ್ಕಿಯ ಜತೆಗೆ 10 ಕೆಜಿ ಅಕ್ಕಿಯನ್ನು ಸೇರಿಸಿ 15 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಬೇಕು. ಮೇ 2 ರಂದು ಕೇಂದ್ರದಲ್ಲಿ ಕ್ಯಾಬಿನೆಟ್ ಸಭೆಯಲ್ಲಿ ಉಚಿತವಾಗಿ ಹೆಚ್ಚುವರಿ ಅಕ್ಕಿ ಮತ್ತು ಗೋಧಿಯನ್ನು ರಾಜ್ಯಗಳಿಗೆ ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ಇಡೀ ದಾಸ್ತಾನು ಮಾರುಕಟ್ಟೆಯನ್ನು ಸರಿದೂಗಿಸಲು ಕೇಂದ್ರ ಈ ತೀರ್ಮಾನ ತೆಗೆದುಕೊಂಡಿತ್ತು. ಜೂ.9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚುವರಿ ಅಕ್ಕಿ ನೀಡಬೇಕು ಎಂದು ಪತ್ರ ಬರೆದಿದ್ದಾರೆ. ಚುನಾವಣೆಗೂ ಮುನ್ನವೇ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂದು ಹೇಳಿದೆ. ಈಗ ಕಾಂಗ್ರೆಸ್ ಅಕ್ಕಿ ನೀಡಲು ವಿಲವಾಗಿ ಅದನ್ನು ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದೆ. ಇದರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರನ್ನು ಬಂಧಿಸಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.
ಮಾಜಿ ಶಾಸಕ ಎಸ್.ಬಾಲರಾಜ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಸುಂದರ್, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜ್, ಜಿಲ್ಲಾ ಮಾಧ್ಯಮ ಪ್ರಮುಖ್ ಮಂಜುನಾಥ್ ಇದ್ದರು.