ಚಾಮರಾಜನಗರ: ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಡಿ.21 ರಂದು ಜರುಗಲಿರುವ ಜಿಲ್ಲಾ ಮಟ್ಟದ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸಮಾವೇಶದ ಉಸ್ತುವಾರಿ ಅರಕಲವಾಡಿ ನಾಗೇಂದ್ರ ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ನ.8 ರಂದು ಬೃಹತ್ ಪ್ರಜ್ಞಾವಂತರ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಡಿ.21 ರಂದು ಜಿಲ್ಲೆಯಲ್ಲಿ ಮಾದಿಗ ಮುನ್ನೆಡೆ ಆತ್ಮಗೌರವ ಸಮಾವೇಶವನ್ನು ಆಯೋನೆ ಮಾಡಲಾಗಿದ್ದು, ಜನಾಂಗದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆ ಅಪಪ್ರಚಾರಗಳಿಗೆ ಸಮುದಾಯದ ಜನರು ಕಿವಿಗೊಡದೆ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಒಳಮೀಸಲಾತಿಯ ಮಹತ್ವ ತಿಳಿದುಕೊಳ್ಳಬೇಕು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಹಲವು ವರ್ಷಗಳಿಂದ ಮಾದಿಗ ಸಮುದಾಯ ಒಳಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಚಾಮರಾಜನಗರ ಲೋಕಸಭಾ ವ್ಯಾಪ್ತಿಯಲ್ಲಿ ಮಾದಿಗ ಸಮುದಾಯದವರು 2.50 ಲಕ್ಷ ಜನಸಂಖ್ಯೆ ಇದ್ದಾರೆ. ಜಿಲ್ಲೆಯಲ್ಲಿ 1.50 ಲಕ್ಷ ಜನಸಂಖ್ಯೆ ಇದ್ದು, ಒಳಮೀಸಲಾತಿಯನ್ನು ಜಾರಿಗೊಳಿಸಿದಾಗ ಮಾತ್ರ ಜನಾಂಗವು ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡ ಚಾ.ಗು.ನಾಗರಾಜು, ರಾಜೇಂದ್ರಮೂರ್ತಿ, ಲಿಂಗರಾಜು, ಮನು,ಶಿವಣ್ಣ ಹಾಜರಿದ್ದರು.