ಚಾಮರಾಜನಗರ: ಮೈಸೂರು-ಚಾಮರಾಜನಗರ ಹೆದ್ದಾರಿಯಲ್ಲಿರುವ ಸೇತುವೆಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಮೈಸೂರು-ಚಾಮರಾಜನಗರ ಹೆದ್ದಾರಿಯ ಬೈಪಾಸ್ ರಸ್ತೆಯ ಸಮೀಪವಿರುವ ಸೇತುವೆಯ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ೋಷಣೆಗಳನ್ನು ಕೂಗಿ ಕೆಲಕಾಲ ಸಂಚಾರ ತಡೆದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸುರೇಶ್ ವಾಜಪೇಯಿ ಮಾತನಾಡಿ, ಮೈಸೂರು-ಚಾಮರಾಜನಗರ ಮಾರ್ಗವಾಗಿ ದಿನನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದರೂ ಯಾವುದೇ ರೀತಿಯಲ್ಲೂ ಅಭಿವೃದ್ಧಿ ಮಾಡಿಲ್ಲ. ಈ ವರೆಗೂ ಈ ಸೇತುವೆಯನ್ನು ಅಗಲೀಕರಣ ಮಾಡದೇ ಸಾಕಷ್ಟು ಅಪಘಾತಗಳು ಸಂಭವಿಸಿದೆ ಎಂದು ದೂರಿದರು.
ಜಿಲ್ಲೆಯ ಉಸ್ತವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಇದನ್ನು ಶೀಘ್ರದಲ್ಲೇ ಗಮನಹರಿಸಿ ಮೈಸೂರು-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸೇತುವೆಯನ್ನು ಅಗಲೀಕರಣಮಾಡಿ, ಆದಷ್ಟು ಬೇಗ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೇ ನಮ್ಮ ಸಂಘಟನೆ ವತಿಯಿಂದ ಕಪ್ಪುಬಾವುಟ ಪ್ರದರ್ಶನ ಮಾಡಲಾಗುವುದು ಹಾಗೂ ಚಾಮರಾಜನಗರ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಟೌನ್ ಅಧ್ಯಕ್ಷ ಆಟೋ ಮಂಜುನಾಥ್, ರಘು, ಬಂಗಾರು, ಸುನೀಲ್, ಆಟೋ ಅಶ್ವಥ್ ಹಾಗೂ ಇತರರು ಭಾಗವಹಿಸಿದ್ದರು.