ಚಾಮರಾಜನಗರ: ನೀರಿನ ಮಿತವಾದ ಬಳಕೆ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಜಲಶಕ್ತಿ ಮಂತ್ರಾಲಯ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಮಂತ್ರಾಲಯ, ಕೇಂದ್ರೀಯ ಅಂತರ್ಜಲ ಮಂಡಳಿ ವತಿಯಿಂದ ಸೋಮವಾರ ಆಯೋಜಿಸಿದ್ದ ಅಂತರ್ಜಲ ಅಭಿವೃದ್ಧಿ ಮತ್ತು ನಿರ್ವಹಣೆ ಅಭ್ಯಾಸಗಳ ಕುರಿತ ತೃತೀಯ ಸ್ತರದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೇವಲ 2.7 ರಷ್ಟು ಮಾತ್ರ ಕುಡಿಯುವ ನೀರು ಇದ್ದು, ಅಂತರ್ಜಲ ಮಟ್ಟವು ಸಹ ಕುಸಿತ ಕಾಣುತ್ತಿದೆ. ಗುಂಡ್ಲುಪೇಟೆ ತಾಲೂಕಿನಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದರೂ ಸಹ ಅವರು ಹೊರ ಜಿಲ್ಲೆಗಳಿಗೆ ತರಕಾರಿ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನೀರನ್ನು ಮಿತವಾಗಿ ಹೇಗೆ ಬಳಕೆ ಮಾಡಬೇಕು ಎಂಬುದರ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿ, ನೀರನ್ನು ಉಳಿಸಲು ಪಣ ತೊಡಬೇಕು ಎಂದು ತಿಳಿಸಿದರು.
ಹಲವಡೆ ನೀರಿನ ಬಳಕೆಗಿಂತ ದುರುಪಯೋಗವೇ ಹೆಚ್ಚಾಗುತ್ತಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಬೇಕಾಗಿದೆ. ನೀರಿನ ಅಭಾವದಿಂದ ಕಾಡಿನಲ್ಲೂ ಸಹ ನೀರಿಲ್ಲದೇ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಮಾನವ-ಪ್ರಾಣಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ನಗರಸಭೆ, ಪುರಸಭೆ ಮತ್ತು ಗಾ.್ರಪಂ ಮಟ್ಟದಲ್ಲಿ ನೀರಿನ ಸದ್ಬಳಕೆ ಕುರಿತು ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.
ಸಿಜಿಡಬ್ಲ್ಯೂಬಿ ನ ಹಿರಿಯ ವಿಜ್ಞಾನಿ ಎಚ್.ಪಿ. ಜಯಪ್ರಕಾಶ್ ಮಾತನಾಡಿ, ನಿರಂತರವಾಗಿ ಅಂತರ್ಜಲವನ್ನು ಬಗೆಯುತ್ತಿರುವುದರಿಂದ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಅಂತರ್ಜಲದ ಮಹತ್ವವನ್ನು ತಿಳಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಆರ್. ಧನಲಕ್ಷ್ಮೀ, ಸಿಜಿಡಬ್ಲ್ಯೂಬಿ ನ ವಿಜ್ಞಾನಿಗಳಾದ ಕ್ಯಾರೋಲಿನ್ ಲೂಯಿಸ್, ಯೋಗೇಶ್, ಶ್ವೇತಾ, ನಿವೃತ್ತ ಹಿರಿಯ ವಿಜ್ಞಾನಿ ಸೂರ್ಯನಾರಾಯಣ, ರವಿಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.