ಚಾಮರಾಜನಗರ: ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಯರಿಯೂರು ಒತ್ತಾಯಿಸಿದರು.
ಕೊಳ್ಳೇಗಾಲ ಹನೂರು ತಾಲೂಕು ವ್ಯಾಪ್ತಿಯಲ್ಲಿ ಜಲಾನಯನ ಅಭಿವೃದ್ಧಿ ಹಾಗೂ ಇನ್ನಿತರೆ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಠಚಾರ ನಡೆಸಿರುವ ಕೊಳ್ಳೇಗಾಲ ಮತ್ತು ಹನೂರು ಸಹಾಯಕ ಕೃಷಿ ನಿರ್ದೇಶಕಿ ಸುಂದರಮ್ಮ ಹಾಗೂ ಹನೂರು ತಾಲೂಕು ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೆಂಕಟನಾಯಕ ವಿರುದ್ದ ಸಮಗ್ರ ತನಿಖೆ ನಡೆಸಿ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ನಾನಾ ಇಲಾಖೆಗಳ ಮೂಲಕ ಕೋಟ್ಯಾಂತರ ರೂ.ಅನುದಾನ ಬಿಡುಗಡೆ ಮಾಡಿದೆ. ಈ ಯೋಜನೆಗಳಲ್ಲಿ ನಡೆದಿರುವ ಎಲ್ಲ ಕಾಮಕಾರಿಗಳು ಸಂಪೂರ್ಣ ಕಳೆಪೆ ಕಾಮಗಾರಿಯಾಗಿದ್ದು, ಸಂಪೂರ್ಣ ಹಾಳಾಗಿರುತ್ತದೆ. ಕೆಲವು ಕಾಮಗಾರಿಗಳನ್ನು ಕೆಲಸ ಮಾಡದೆ ಪುಸ್ತಕ, ಪೇಪರ್‌ಗಳಲ್ಲಿ ಕೆಲಸ ತೊರಿಸಿ ನಕಲಿ ಬಿಲ್‌ಗಳನ್ನು ತಯಾರಿಸಿ ತಮಗಿಷ್ಠ ಬಂದ ಗುತ್ತಿಗೆದಾರರ ಹೆಸರಿನಲ್ಲಿ ಬಿಲ್ ಮಾಡಿಸಿ ಗುತ್ತಿಗೆದಾರರಿಗೆ ಇಂತಿಷ್ಠು ಶೇಕಡಾವಾರು ಹಣ ನೀಡಿ ಉಳಿಕೆ ಹಣವನ್ನು ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಇವರ ವಿರುದ್ದ ಸಮಗ್ರ ತನಿಖೆ ನಡೆಸಿ, ಅವರನ್ನು ಸೇವೆಯಿಂದ ಅಮಾನತ್ತುಪಡಿಸಬೇಕು ಎಂದು ಈಗಾಗಲೇ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಇದರ ವಿರುದ್ದ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ನಂಜುಂಡಸ್ವಾಮಿ, ದೊರೆಸ್ವಾಮಿ (ಜಾನಿ) ತಾಲೂಕು ಸಂಚಾಲಕ ಅನಿಲ್‌ಕುಮಾರ್, ಮಂಜುಸ್ವಾಮಿ ಹನೂರು, ಸುರೇಂದ್ರಕೊಳ್ಳೇಗಾಲ, ರಂಗಸ್ವಾಮಿ ಗುಂಡ್ಲುಪೇಟೆ ಹಾಜರಿದ್ದರು.