ಚಾಮರಾಜನಗರ: ಎಸ್ಸಿ, ಎಸ್ಟಿ ಸಮುದಾಯದ ಸಾಗುವಳಿ ಜಮೀನುದಾರರಿಗೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ನಿವಾಸಿಗಳಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ತಾಲೂಕಿನ ಎಚ್.ಡಿ.ಫಾರೆಸ್ಟ್ ಹಾಗೂ ಪುಣಜನೂರು ಸ್ಟೇಟ್ ಫಾರೆಸ್ಟ್ ಸರ್ವೆ ನಂಬರ್ 1, 3, 5 ರಲ್ಲಿ ಸುಮಾರು 150 ಕುಟುಂಬಗಳಿಗೆ ಸೇರಿದ ಜಮೀನುಗಳಿದ್ದು, ಇದರಲ್ಲಿ 50 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಕಳೆದ 2 ವರ್ಷಗಳಿಂದ ಕೋವಿಡ್ ಇದ್ದ ಕಾರಣದಿಂದ ಆರ್ಥಿಕವಾಗಿ ಸಮಸ್ಯೆಗೆ ಸಿಲುಕಿ ಕೆಲವು ಕುಟುಂಬಗಳು ವ್ಯವಸಾಯ ಮಾಡದೇ ತಟಸ್ಥವಾಗಿದ್ದೆವು. ಆದರೆ ಇತ್ತೀಚೆಗೆ ನಮ್ಮ ಜಮೀನು ಉಳುಮೆ ಮಾಡಲು ಹೋದರೆ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಈಗಾಗಲೇ ಈ ವಿಚಾರವಾಗಿ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ದಲಿತ ಸಮುದಾಯದವರ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಜಿಲ್ಲಾಡಳಿತ ಭವನದ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಜಿಲ್ಲಾ ಸಂಯೋಜಕ ಕೆ.ಎಂ.ನಾಗರಾಜ್, ವಕೀಲ ದಲಿತ್ ರಾಜ್, ಉಮೇಶ್ ಕುಮಾರ್, ಯ.ಮಹದೇವಯ್ಯ, ಶಿವಣ್ಣ, ಆಟೋ ಉಮೇಶ್, ರಂಗಸ್ವಾಮಿ, ನಾಗರಾಜ್ ಹಾಗೂ ಇತರರು ಭಾಗವಹಿಸಿದ್ದರು.
ತಹಸೀಲ್ದಾರ್ ವಿರುದ್ಧ ಆಕ್ರೋಶ:
ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರು ಎಸ್ಸಿ/ಎಸ್ಟಿ ಸಮುದಾಯಗಳ ಜಮೀನಿನ ವಿಚಾರದಲ್ಲಿ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ದಲಿತ ಮುಖಂಡರು ಆಕ್ರೋಶ ಹೊರಹಾಕಿದರು. ಅರಣ್ಯ ಇಲಾಖೆಯಲ್ಲಿ ಈ ಜಮೀನಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಭೂರಹಿತ ದಲಿತ ಸಮುದಾದ ಜನರಿಗೆ ತೊಂದರೆ ನೀಡುತ್ತಿದ್ದಾರೆ. ಇದನ್ನು ಕೇಳಲು ಹೋದರೆ ಜಿಲ್ಲಾಧಿಕಾರಿಗಳು ಗನ್‌ಮ್ಯಾನ್ ಕರೆದು ಕಚೇರಿಯಿಂದ ಹೊರಗೆ ಹೋಗುವಂತೆ ಹೇಳುತ್ತಾರೆ. ಈ ವಿಚಾರದಲ್ಲಿ ತಹಸೀಲ್ದಾರ್ ಬಸವರಾಜ್ ಅವರು ಜಿಲ್ಲಾಧಿಕಾರಿಗಳನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.