ಜಿಲ್ಲೆ

ಅಂತರ್ಜಾಲ ಬಳಕೆಯಿಂದ ಅಪರಾಧ ಹೆಚ್ಚಳ

ಎ.ಎಸ್.ಮಣಿಕಂಠ

ಚಾಮರಾಜನಗರ:ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಬಳಕೆ ಹೆಚ್ಚಾಗಿದ್ದು, ಇದರಿಂದ ಮಾನವ ಕಳ್ಳಸಾಗಾಣಿಕೆ ಹಾಗೂ ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣಗಳು, ಸೈಬರ್ ಅಪರಾಧಗಳು ಹೆಚ್ಚಾಗುತ್ತಿರುವುದು ಇಂದಿನ ಪರಿಸ್ಥಿತಿಯ ದುರಂತವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್. ಭಾರತಿ ತಿಳಿಸಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಹಾಗೂ ಯಂಗ್ ಇಂಡಿಯಾ ಅರ್ಬನ್ ಅಂಡ್ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆಯ ಹೊಸ ಆಯಾಮಗಳು ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಕಳ್ಳಸಾಗಾಣಿಕೆಯು ದೇಶದೆಲ್ಲೆಡೆ ನಡೆಯುತ್ತಿರುವ ಬಹುದೊಡ್ಡ ಅಪರಾಧವಾಗಿದೆ. ಮನುಷ್ಯರೇ ಕಳ್ಳಸಾಗಣೆ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಮನುಕುಲಕ್ಕೆ ಶೋಚನೀಯವಾಗಿ ಪರಿನಮಿಸಿದೆ. ಹಾಗಾಗಿ ಮನುಷ್ಯರಾದವರು ತಮ್ಮಲ್ಲಿ ತಾವು ಬದಲಾವಣೆ ಕಂಡುಕೊಂಡಾಗ ಮಾತ್ರ ಸಮಾಜದಲ್ಲಿ ನ್ಯಾಯಯುತವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದ್ದು, ಇತರರಿಗೂ ಇದು ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಮಾನವ ಕಳ್ಳಸಾಗಾಣಿಕೆಯ ಅರಿವು, ಚಿಂತನೆ ನಾಗರಿಕ ಸಮಾಜಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.

ಮಾನವ ಕಳ್ಳ ಸಾಗಾಣಿಕೆ ತಡೆಯಲು ಪ್ರತಿಯೊಬ್ಬರಿಗೂ ಅರಿವು ಅಗತ್ಯವಾಗಿದ್ದು, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಳ್ಳಸಾಗಾಣಿಕೆ ನಡೆಯದಂತೆ ನಾಗರಿಕರು ಹೆಚ್ಚಿನ ಜಾಗೃತಿ ವಹಿಸಬೇಕು. ಸಾರ್ವಜನಿಕರು ಒತ್ತಡ ಮುಕ್ತರಾಗಿ ಕಾನೂನಾತ್ಮಕವಾಗಿ ಹೋರಾಡಬೇಕು. ತಪ್ಪಿತಸ್ಥನಿಗೆ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಯಾಗಬೇಕು ಎಂದು ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅವರು ತಿಳಿಸಿದರು.

ಒಡನಾಡಿ ಸೇವಾ ಸಂಸ್ಥೆಯ ಕಾರ್ಯದರ್ಶಿ ಸ್ಟ್ಯಾನ್ಲಿ ಮಾತನಾಡಿ, ಸಂಸ್ಥೆಯಿಂದ ಹಮ್ಮಿಕೊಂಡಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಿಸಿ ಸಂಸ್ಥೆಯು ಮಹಿಳೆಯರು, ಮಕ್ಕಳು ಸೇರಿದಂತೆ ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಕೆಲಸ ಮಾಡುತ್ತಿದೆ. ಆರಂಭದ ದಿನಗಳಲ್ಲಿ ಮಾನವ ಕಳ್ಳಸಾಗಣೆ ಸಾಂಪ್ರಾದಾಯಿಕವಾಗಿ ನಡೆಯುತ್ತಿತ್ತು. ಇಂದು ಎಲ್ಲವೂ ಬದಲಾಗುತ್ತಿದೆ. ತಾಂತ್ರಿಕತೆ ಎಲ್ಲರನ್ನು ಅವರಿಸಿಕೊಂಡಿದೆ. ಕೋರೊನಾ ನಂತರದ ದಿನಗಳಲ್ಲಿ ಮಕ್ಕಳ ಪಾಡು ಭೀಕರವಾಗಿದೆ. ಮೊಬೈಲ್ ಬಳಕೆ ಅತಿಯಾಗಿದೆ. ಮೊಬೈಲ್ ಆಧಾರಿತ ಶೋಷಣೆ ಇಂದು ಅವ್ಯಾಹತವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪ್ರತಿಯೊಬ್ಬರು ಪಣತೊಡಬೇಕಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಮಾನವ ಕಳ್ಳಸಾಗಾಣಿಕೆಯ ಹೊಸ ಆಯಾಮಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವ ಉತ್ತಮ ವಿಚಾರವಾಗಿದೆ. ಮಾನವ ಕಳ್ಳಸಾಗಾಣಿಕೆ ಪ್ರಕರಣಗಳಲ್ಲಿ ಬಹುಪಾಲು ಮಹಿಳೆಯರು, ಮಕ್ಕಳು ಸಿಲುಕಿರುವುದನ್ನ ಕಾಣಬಹುದಾಗಿದೆ. ಮಾನವ ಕಳ್ಳಸಾಗಾಣಿಕೆ ಸಾಮಾಜಿಕ, ರಾಜಕೀಯ, ಅರ್ಥಿಕ, ಶೈಕ್ಷಣಿಕ ಹಾಗೂ ಕಾನೂನಾತ್ಮಕ ಸವಾಲಾಗಿ ಪರಿಣಮಿಸಿದೆ. ಇದರ ತಡೆಗಾಗಿ ಸಾಕಷ್ಟು ಸ್ವಯಂ ಸೇವಾಸಂಸ್ಥೆಗಳು ಸಮಾಜಮುಖಿಯಾಗಿ ಅವಿರತ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ಸೃಷ್ಠಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ವಿರೂಪಾಕ್ಷ, ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಪರಶುರಾಮ್, ಯಂಗ್ ಇಂಡಿಯಾ ಅರ್ಬನ್ ಅಂಡ್ ರೂರಲ್ ಡೆವಲಪ್‌ಮೆಂಟ್ ನಿರ್ದೇಶಕ ಎಂ. ರಾಘವೇಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ಪ್ರಸನ್ನ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ವೈ.ಐ.ಯು.ಆರ್.ಡಿ ಕಾರ್ಯದರ್ಶಿ ರಾಚಪ್ಪಾಜಿ, ಟ್ರಸ್ಟಿ ಶೀಲಾ, ಇತರರು ಉಪಸ್ಥಿತರಿದ್ದರು.