ಜಿಲ್ಲೆ

ಹಿಂದುಗಳಿಗೆ ಕಾರ್ತಿಕಮಾಸ ವಿಶೇಷವಾದದ್ದು

ಎ.ಎಸ್.ಮಣಿಕಂಠ

ಚಾಮರಾಜನಗರ: ದೀಪದ ಬೆಳಕು ಎಲ್ಲಾ ಕಡೆ ಹರಡುವ ರೀತಿಯಲ್ಲಿ, ಮಹಿಳೆಯರು ವಿದ್ಯಾಭ್ಯಾಸ ಕಲಿತು ಮುಖ್ಯವಾಹಿನಿಗೆ ಬರಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾಹುಡೇದ ತಿಳಿಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನ ಆವರಣದಲ್ಲಿ ಕಡೆ ಕಾರ್ತಿಕ ಸೋಮವಾರ ಪ್ರಯುಕ್ತ ವಿಶ್ವ ಹಿಂದೂ ಪರಿಷತ್, ಮಾತೃ ಶಕ್ತಿ ಮಂಡಳಿ ವತಿಯಿಂದ ಆಯೋಜಿಸಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆಯರು ತಮ್ಮಲ್ಲಿರುವ ಸಂಕೋಚಿತ ಮನೋಭಾವನೆ ತೆಗೆದುಹಾಕಿ ಸಾಗಬೇಕು. ಶಕ್ತಿ ದೀಪದಲ್ಲಿದೆ, ಅದರಂತೆ ಮಹಿಳೆಯರ ಭವಿಷ್ಯ ಉಜ್ವಲವಾಗಬೇಕು. ಕಾರ್ತಿಕಮಾಸವು ಹಿಂದು ಧರ್ಮದಲ್ಲಿ ಅತ್ಯಂತ ಮಂಗಳಕರವಾದ ತಿಂಗಳಾಗಿದೆ. ಈ ತಿಂಗಳಲ್ಲಿ ದೀಪ ಬೆಳಗಿಸಿ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುವುದು. ಕಾರ್ತಿಕಮಾಸದಲ್ಲಿ ದೀಪಗಳನ್ನು ಮನೆಯ ಮುಖ್ಯ ದ್ವಾರದಲ್ಲಿ ಸೂರ್ಯ ಮುಳುಗಿದ ನಂತರ ಹಚ್ಚಲಾಗುತ್ತದೆ. ಇದರಿಂದ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿದೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯ ಪ್ರಮುಖ್ ಸುಧಾಂಶು ಮಾತನಾಡಿ, ಕಾರ್ತಿಕ ಮಾಸದಲ್ಲಿ ಏನೇ ಕೆಲಸ ಕಾರ್ಯಗಳು ಮಾಡಿದರೂ ಶುಭ ಆಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದೇವಸ್ಥಾನಗಳಿಗೆ ಭೇಟಿ ನೀಡಿದರೆ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗಲಿದೆ. ಈ ಮಾಸದಲ್ಲಿ ಪ್ರಮುಖ ನದಿಗಳಲ್ಲಿ ಸ್ಥಾನ ಮಾಡುವುದು ಮತ್ತೊಂದು ಪ್ರಮುಖ ಆಚರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಎಸ್‌ವಿ ಪ್ರತಿಷ್ಠಾನದ ಅಧ್ಯಕ್ಷ ವೆಂಕಟನಾಗಪ್ಪಶೆಟ್ಟಿ ಬಾಬು, ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಡಾ.ಮಾನಸ, ವಿಶ್ವ ಹಿಂದೂ ಪರಿಷತ್ ಮುಖಂಡ ರಾ.ಸತೀಶ್, ಮಂಜುನಾಥ್, ಪ್ರಜಾಪ್ರಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಮುಖ್ಯ ಸಂಚಾಲಕಿ ದಾನೇಶ್ವರಿ, ಮಾತೃ ಶಕ್ತಿ ಮಂಡಳಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯೆ ನಂದಿನಿ ರವಿಕುಮಾರ್, ಸೇವಾ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್, ಮುಖ್ಯಶಿಕ್ಷಕಿ ರಾಧಿಕಾ ಹಾಗೂ ಇತರರು ಭಾಗವಹಿಸಿದ್ದರು.