ಜಿಲ್ಲೆ

ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ

ಎ.ಎಸ್.ಮಣಿಕಂಠ

ಚಾಮರಾಜನಗರ: ವಿದ್ಯಾರ್ಥಿನಿಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘಣೆ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಸಂವಿಧಾನಾತ್ಮಕವಾಗಿ ದಕ್ಕಿರುವ ಮಹಿಳಾ ಸಮಾನತೆಯನ್ನು ಎಲ್ಲರಿಗೂ ದೊರೆಯುವಂತೆ ಮಾಡಬೇಕು ಎಂದು ರಾಮಸಮುದ್ರ ಪೂರ್ವ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ತಿಳಿಸಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದಲ್ಲಿರುವ ಸರ್ಕಾರಿ ವರ್ಗೀಕೃತ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದಕ್ಷಿಣ ಭಾರತ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಅರಿವು ಮೂಡಿಸಲು 1948 ಡಿ.10 ರಂದು ಮಾನವ ಹಕ್ಕುಗಳ ದಿನಾಚರಣೆ ಅಸ್ತಿತ್ವಕ್ಕೆ ಬಂತು. ಸ್ವಾತಂತ್ರ್ಯ ನಂತರ ದೇಶದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ ಪೋಲಿಸ್ ವ್ಯವಸ್ಥೆ ಜಾರಿಯಾಲ್ಲಿತ್ತು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿತ್ತು. ನಂತರ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಯಾದ ಬಳಿಕ ಸಂವಿಧಾನದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸ್ಪಷ್ಟವಾದ ಕಾಯ್ದೆಯನ್ನು ನೀಡಲಾಯಿತು ಎಂದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಕಲ್ಪಿಸುವ ಕೊಡುವ ಮೂಲಕ ಸಮಾನತೆಯನ್ನು ಸಾರಿದರು. ಶಿಕ್ಷಣ ಮತ್ತು ಉದ್ಯೋಗ ಹಕ್ಕು ನೀಡುವ ತೆಗೆ ಪುರುಷರಷ್ಟೇ ಮಹಿಳೆಯು ಸಮಾನರಾಗಿದ್ದಾಳೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮೊದಲ ಅದ್ಯತೆ ನೀಡಬೇಕು. ಅದರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಮಾತನಾಡಿ, ಅನಗತ್ಯವಾಗಿ ಓರ್ವ ವ್ಯಕ್ತಿಗೆ ಅವನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ನಡೆದುಕೊಳ್ಳುವುದೇ ಮಾನವ ಹಕ್ಕು ಉಲ್ಲಂಘನೆಯಾದಂತೆ. ಪ್ರತಿಯೊಬ್ಬರು ಸ್ವಾತಂತ್ರ್ಯರು. ಅವರ ಜೀವನ ಮತ್ತು ಬದುಕುನ್ನು ಕಿತ್ತುಕೊಳ್ಳಲು ಯಾರಿದಂಲು ಸಾಧ್ಯವಿಲ್ಲ. ಮದುವೆಯಾಗುವಾಗ ಅತಿಯಾದ ವರದಕ್ಷಿಣೆಗೆ ಪೀಡಿಸುವುದು ಸಹ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವಕೀಲೆ ಸವಿತಾ, ಸಿಕ್ರಂನ ಜಿಲ್ಲಾ ಸಂಯೋಜಕ ಕೆ.ಸಿ.ರೇವಣ್ಣ, ಜನಹಿತಾಶಕ್ತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್, ವಕೀಲ ಎಂ.ಮಹೇಶ್, ನಿಲಯ ಪಾಲಕಿ ಶಿವಮ್ಮಉಪಸ್ಥಿತರಿದ್ದರು.