ಜಿಲ್ಲೆ

ಸಾವಯವ ಕೃಷಿಯಲ್ಲೇ ಬದುಕು ಹಸನು

ಎ.ಎಸ್.ಮಣಿಕಂಠ

ಚಾಮರಾಜನಗರ: ಕೃಷಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಸಾವಯವ ಕೃಷಿಯತ್ತಾ ಆಕರ್ಷಿತರಾದ ರೈತರೊಬ್ಬರು ಸುಮಾರು 4 ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ.

ತಾಲೂಕಿನ ಕೂಡ್ಲೂರು ಗ್ರಾಮದ ಚಿನ್ನಸ್ವಾಮಿಶೆಟ್ಟಿ ಹಾಗೂ ಹಾಲಮ್ಮ ದಂಪತಿಯ ಪುತ್ರ ಕುಮಾರ್ ಅವರು ಚಿಕ್ಕಂದಿನಿಂದಲೇ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಗ್ರಾಮದಲ್ಲಿರುವ ಸುಮಾರು 8 ಎಕರೆ ಜಮೀನಿನಲ್ಲಿ 20 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದು, ಪ್ರಸ್ತುತ 4 ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ಕುಮಾರ್ ಅವರ ಜಮೀನಿನಲ್ಲಿ ತೆಂಗು, ಅಡಿಕೆ, ಬಾಳೆ, ಟೊಮ್ಯಾಟೋ, ಮೆಣಸು, ಅರಿಶಿಣ, ಬೀನ್ಸ್ ಬೆಳೆ ಇದ್ದು, ಹಲವಾರು ಹಣ್ಣು ಹಾಗೂ ಹೂವಿನ ಗಿಡಗಳನ್ನು ಬೆಳೆದಿದ್ದಾರೆ.

ಈ ಹಿಂದೆ ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದ ಕೃಷಿಕ ಕುಮಾರ್ ಅವರು, ಹಲವಾರು ಕೃಷಿ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಳೆದ ಮೂರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಸಂಪೂರ್ಣ ಸಾವಯವ ಕೃಷಿ ಮಾಡಬೇಕು ಎಂಬ ಯೋಜನೆ ಹೊತ್ತಿರುವ ಅವರು ಅರಣ್ಯ ಕೃಷಿಗೂ ಮುಂದಾಗಿದ್ದು, ಸುಮಾರು 1 ಎಕರೆಯಲ್ಲಿ ಎಬ್ಬೇವಿನ ಮರ, ತೇಗದ ಮರ, ಮಹಾಗಣಿ ಹಾಗೂ 10 ಶ್ರೀಗಂಧದ ಮರಗಳನ್ನು ಬೆಳೆದಿದ್ದಾರೆ. ನಡುವಲ್ಲಿ ತರಕಾರಿ ಹಾಗೂ ಸೊಪ್ಪನ್ನು ಬೆಳೆಯುತ್ತಿದ್ದಾರೆ. ಜಮೀನಿನಲ್ಲೇ ಸುಮಾರು 4 ಹಸುಗಳು ಇದ್ದು, ಹಾಲಿಗಿಂತಲೂ ಗೊಬ್ಬರ ಹಾಗೂ ಗಂಜಲಕ್ಕಾಗಿ ಹಸುಗಳನ್ನು ಸಾಕುತ್ತಿದ್ದಾರೆ. ಹಸುವಿನ ಗೊಬ್ಬರ, ಜಮೀನಿನಲ್ಲಿ ದೊರೆಯುವ ಕಳೆ ಹಾಗೂ ಎಲೆಗಳನ್ನೇ ಗೊಬ್ಬರವಾಗಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕುಮಾರ್, ಸಾವಯವ ಮಾದರಿಯಲ್ಲಿ ಉತ್ತಮ ಬೆಳೆ ಬೆಳೆಯುವುದಲ್ಲದೇ ವರ್ಷಕ್ಕೆ 4-5 ಲಕ್ಷ ರೂ. ಲಾಭವನ್ನು ಗಳಿಸುತ್ತಿದ್ದಾರೆ.

ಜೀವಾಮೃತ ತಯಾರಿ:
ಕೂಡ್ಲೂರು ಗ್ರಾಮದ ಕೃಷಿಕ ಕುಮಾರ್ ತಮ್ಮ ಜಮೀನಲ್ಲೇ ತಯಾರಿಸುವ ಜೀವಾಮೃತ ಉತ್ತಮ ಬೆಳೆ ಹಾಗೂ ದುಪ್ಪಟ್ಟು ಲಾಭ ತೆಗೆಯಲು ಸಹಕಾರಿಯಾಗಿದೆ. ಸುಮಾರು 200 ಲೀ ಸಂಗ್ರಹದ ಡ್ರಮ್ನಲ್ಲಿ ಮುಕ್ಕಾಲು ಭಾಗ ನೀರನ್ನು ಹಾಕಿ, 10 ಕೆ.ಜಿ ಯಷ್ಟು ಸಗಣಿ, 10 ಲೀ ಗೋಮೂತ್ರ, 2 ಕೆ.ಜಿ ಕಡ್ಲೆಹಿಟ್ಟು ಹಾಗೂ 2 ಕೆ.ಜಿ ಬೆಲ್ಲ ಅಥವಾ ಡಿ ಕಾಂಪೋಸ್ಟ್ ಚೆನ್ನಾಗಿ ಮಿಶ್ರಣಮಾಡಿ 7-15 ದಿನಗಳ ವರೆಗೆ ಗಿಡಗಳಿಗೆ ಕೊಡಲಾಗುತ್ತದೆ. ಪ್ರತಿಯೊಂದು ಸಸಿಗಳಿಗೂ ಪ್ರತ್ಯೇಕವಾಗಿ ಹಾಕುವ ಅಥವಾ ಡ್ರಿಪ್ ಮೂಲಕ ಸಿಂಪಡಿಸುವ ವ್ಯವಸ್ಥೆ ಮಾಡಿದ್ದಾರೆ. ಅದಲ್ಲದೇ ಹೊಂಗೆ, ಬೇವು, ಲಕ್ಕೆ, ಲಂಟಾನಾ, ಪಾರ್ಥೇನಿಯಂ ಅಥವಾ ಕೊಳೆತ ಹಣ್ಣುಗಳನ್ನು ಹಸುವಿನ ಗಂಜಲ ಹಾಗೂ ಸಗಣಿಯಲ್ಲಿ ಮಿಶ್ರಣಮಾಡಿ ತಿಂಗಳುಗಳ ಕಾಲ ಕೊಳೆಹಾಕಿ ಬಳಿಕ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡುತ್ತಾರೆ. ಇದರಿಂದಾಗಿ ತೆಂಗು, ಬಾಳೆ ಮತ್ತು ಇನ್ನಿತರೆ ಫಸಲು ತುಂಬಾ ಉತ್ಕೃಷ್ಟವಾಗಿ ಬೆಳೆದಿದ್ದು, ಒಳ್ಳೆಯ ಲಾಭವನ್ನು ತಂದುಕೊಡುತ್ತಿದೆ.

ದುಪ್ಪಟ್ಟು ಲಾಭ:
ಸಾವಯವ ಕೃಷಿ ಮೊದಲಿಗೆ ಕಷ್ಟವಾದರೂ, ಬಳಿಕ ದುಪ್ಪಟ್ಟು ಲಾಭ ಗಳಿಸಲು ಸಹಕಾರಿಯಾಗಿದೆ ಎಂದು ಹೇಳುವ ಕುಮಾರ್ ಅವರು, ಅದನ್ನು ಸಾಧಿಸಿಯೂ ತೋರಿಸಿದ್ದಾರೆ. ತೆಂಗು ಮತ್ತು ಬಾಳೆಯಲ್ಲಿ ಈ ಮೊದಲು ಉತ್ತಮ ಸಲು ಬರುತ್ತಿರಲಿಲ್ಲ. ಆದರೆ ಸಾವಯವ ಕೃಷಿಯನ್ನು ಅಳವಡಿಸಿಕೊಂಡ ನಂತರದಲ್ಲಿ ಉತ್ತಮ ಸಲು ಕೈ ಸೇರುತ್ತಿದೆ. ತಿಂಗಳಿಗೊಮ್ಮೆ ಎಳನೀರು ಕೂಯ್ಲು ಮಾಡುತ್ತಾರೆ. ಗೊಬ್ಬರ ಕೊಡಲು ಶುರುಮಾಡಿದ ಮೇಲೆ ಪ್ರತಿ ತಿಂಗಳು ಹೊಂಬಾಳೆ ಹೊಡೆಯುತ್ತಿದೆ. ಅದರಿಂದಲೇ ಸಾಕಷ್ಟು ಲಾಭ ಬರುತ್ತಿದೆ. ಇನ್ನು ಜಮೀನಿನಲ್ಲಿ ಅರಿಶಿಣವನ್ನು ಬಿತ್ತನೆ ಮಾಡಿದ್ದು, ಯಾವುದೇ ರೀತಿಯ ರಾಸಾಯನಿಕ ಬಳಸದೇ, ಕೇವಲ ಜೀವಾಮೃತವನ್ನು ಬಳಸಿ ಉತ್ತಮ ಬೆಳೆ ಬೆಳೆದಿದ್ದಾರೆ. ಸಾವಯವ ಗೊಬ್ಬರವನ್ನು ಬಳಸಿ ಬೆಳೆಯುತ್ತಿರುವ ಅಡಿಕೆಯೂ ಉತ್ತಮ ರೀತಿಯಲ್ಲಿದೆ. ಜಮೀನಿನಲ್ಲಿ ಕಳೆಯನ್ನು ತೆಗೆಯದೇ ಅದನ್ನೇ ಗೊಬ್ಬರವಾಗಿಸುವ ತಂತ್ರವನ್ನು ಅಳವಡಿಸಿಕೊಂಡು ಯಶಸ್ಸಿನ ಕೃಷಿ ಮಾಡುತ್ತಿದ್ದಾರೆ.

ಕೃಷಿ ಸಂಬಂಧ ಕಾರ್ಯಕ್ರಮಗಳ ಸ್ಪೂರ್ತಿ:
ಈ ಹಿಂದೆ ರಾಸಾಯನಿಕಯುಕ್ತ ಕೃಷಿಯನ್ನೇ ಮಾಡುತ್ತಿದ್ದ ಕುಮಾರ್ ಅವರು ಅನೇಕ ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾವಯವ ಕೃಷಿಯತ್ತಾ ಮುಖಮಾಡಿದ್ದಾರೆ. ಬೆಂಗಳೂರು, ಮಂಡ್ಯ, ಧಾರವಾಡ, ಮೈಸೂರು, ಸುತ್ತೂರು ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ ಆಯೋಜಿಸಿರುವ ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದಾರೆ. ಈ ನಡುವೆ ಅರಣ್ಯ ಕೃಷಿ ಬಗ್ಗೆ ಆಸಕ್ತಿ ಹೊಂದಿರುವ ಕುಮಾರ್, ಕೃಷಿ ಮತ್ತು ಅರಣ್ಯ ಇಲಾಖೆಯಿಂದ ನೀಡಿದ ಸಸಿಗಳನ್ನು ನೆಟ್ಟು ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಮರಗಳ ನೆರಳಲ್ಲಿ ವಿವಿಧ ಬಗೆಯ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಮೀನಿನಲ್ಲಿ ದೊಡ್ಡದೊಂದು ಟ್ಯಾಂಕ್ ನಿರ್ಮಾಣಮಾಡಿ ಸಂಪೂರ್ಣವಾಗಿ ಜಮೀನಿಗೆ ಡ್ರಿಪ್ ಅಳವಡಿಸುವ ಹಾಗೂ ಸಂಪೂರ್ಣವಾಗಿ ಸಾವಯವ ಕೃಷಿಯನ್ನೇ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಮೂಲಕ ಕೃಷಿಕ ಕುಮಾರ್ ಸಾವಯವ ಕೃಷಿಯನ್ನೇ ಬದುಕಾಗಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಸಾವಯವ ಕೃಷಿಯನ್ನು ಅಳವಡಿಸಿಕೊಂಡರೆ ಉತ್ತಮ ಲಾಭಗಳಿಸಲು ಸಾಧ್ಯವಾಗುತ್ತದೆ. ಆದರೆ ಇದನ್ನು ಮಾಡಲು ತುಂಬಾ ಪರಿಶ್ರಮ ಮತ್ತು ತಾಳ್ಮೆ ಮುಖ್ಯವಾಗುತ್ತದೆ. ಕಡಿಮೆ ಖರ್ಚು, ನೀರಿನ ಬಳಕೆಯೂ ಕಡಿಮೆ ಇರುವ ಸಾವಯವ ಕೃಷಿಯಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳುವುದು ಸಾಧ್ಯವಿದೆ.-ಕುಮಾರ್, ಸಾವಯವ ಕೃಷಿಕ, ಕೂಡ್ಲೂರು, ಚಾಮರಾಜನಗರ