ಚಾಮರಾಜನಗರ: ತಾಲೂಕಿನ ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದಿಂದ ವರ್ಗಾವಣೆಗೊಂಡ 6 ಶಿಕ್ಷಕರನ್ನು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬುಧವಾರ ಪುಷ್ಪ ಮಳೆಗರೆದು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಬೇರೆ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಶಿಕ್ಷಕರಾದ ಸಮೀರಾ ಪರ್ವಿನ್‌ತಾಜ್, ತ್ರಿವೇಣಿ, ಜಮುನಾ, ಮಂಜುಳಾ, ರೋಹಿತ್, ಮಹೇಶ್, ನಿವೃತ್ತರಾದ ಡಿ ದರ್ಜೆ ನೌಕರರಾದ ಚೆನ್ನಮ ್ಮಅವರನ್ನು ಸನ್ಮಾನಿಸಲಾಯಿತು. ಶಾಲೆಯ ಮುಖ್ಯದ್ವಾರದಿಂದ ವೇದಿಕೆವರೆಗೂ ಅವರಿಗೆ ಹೂ ಮಳೆಗರೆಯಲಾಯಿತು. ಬಳಿಕ ನಡೆದ ಸಮಾರಂಭದಲ್ಲಿ ಕುದೇರು ಕಾಲೇಜಿನ ಉಪಪ್ರಾಂಶುಪಾಲ ಜಿ.ತಮ್ಮಯ್ಯ ಮಾತನಾಡಿ, ವರ್ಗಾವಣೆಗೊಂಡಿರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾಗಿ ಪಾಠ ಮಾಡಿ ಸೇವೆ ಸಲ್ಲಿಸಿದ್ದರು. ಇದೇ ರೀತಿ ವರ್ಗಾವಣೆಗೊಂಡಿರುವ ಶಾಲೆಗಳಲ್ಲೂ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು. ಸಮಾರಂಭದ ಬಳಿಕ ಶಿಕ್ಷಕರಿಗೆ ಹೋಳಿಗೆ ಊಟ ಹಾಕಲಾಯಿತು.
ಗ್ರಾಮದ ಮುಖಂಡ ರವೀಂದ್ರ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕುಮಾರ್, ಮಾಜಿ ಅಧ್ಯಕ್ಷ ಜಯಶಂಕರ್, ಸದಸ್ಯರಾದ ದೇಮಹಳ್ಳಿ ಶಿವಕುಮಾರ್, ಶ್ರೀಕಂಠಸ್ವಾಮಿ, ತೊರವಳ್ಳಿ ಬಸವರಾಜಪ್ಪ, ರಾಜಶೇಖರ್, ಪ್ರೇಮಾ, ಪ್ರೌಢಶಾಲೆ ಪ್ರಾಂಶುಪಾಲ ಕೆಂಡಗಣ್ಣಸ್ವಾಮಿ, ಶಿಕ್ಷಕರಾದ ರಾಜಪ್ಪ, ಸವಿತಾ ಮತ್ತು ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಜರಿದ್ದರು.